Karnataka
oi-Ravindra Gangal

ಬೆಂಗಳೂರು, ಜೂನ್ 27: ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಹಗರಣಗಳು ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಅವರು, ‘ಹಿಂದಿನ ಸರ್ಕಾರಗಳ ಪ್ರಮುಖ ಹಗರಣಗಳಾದ 4 ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ, 40 ಪರ್ಸೆಂಟ್ ಕಮಿಷನ್, ಕೊರೊನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ, ಪಿಎಸ್ಐ ನೇಮಕಾತಿ ಹಗರಣ ಹಾಗೂ ಬಿಟ್ ಕಾಯಿನ್ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ತನಿಖೆ ನಡೆಸುತ್ತೇವೆ. ಅದಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗುವುದು. ಈ ತನಿಖೆಯನ್ನು ಸಮರ್ಥ ಹಾಗೂ ಹಿರಿಯ ತನಿಖಾಧಿಕಾರಿಗಳು ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಾಗಿರುವ ಹಗರಣಗಳು ( ಆರೋಪಗಳ ಪ್ರಕಾರ )
ಬಿಟ್ ಕಾಯಿನ್: ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲೇ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿಯಾಗಿ ಅವರ ಹೆಸರು ಕೇಳಿಬಂದಿತು. ಇದು ‘ಕಾಂಗ್ರೆಸಿಗರ ಕೈವಾಡ’ ಎಂದು ಹೇಳಿಕೆ ಮೇಲೆ ಹೇಳಿಕೆ ನೀಡುತ್ತಲೇ ಹೋದರೂ ನಿಷ್ಪಕ್ಷಪಾತ ತನಿಖೆ ಆರಂಭವಾಗಲೇ ಇಲ್ಲ. ಆ ನಂತರ, ಶ್ರೀಕಿ ಎಂಬ ಹ್ಯಾಕರ್ ಅನ್ನು ಬಂಧಿಸಲಾಯಿತು.

40 ಪರ್ಸೆಂಟ್ ಕಮಿಷನ್ ಆರೋಪ: ಕರ್ನಾಟಕದ ಬಿಜೆಪಿ ಸರ್ಕಾರವು ಎಲ್ಲಾ ಕಾಮಗಾರಿಗಳಿಗೆ 40 ಪರ್ಸೆಂಟ್ ಕಮಿಷನ್‌ಗೆ ಒತ್ತಾಯಿಸುತ್ತಿದೆ ಮತ್ತು ಆದ್ದರಿಂದ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಆರೋಪಿಸಿದ್ದರು. ಇದರಲ್ಲಿ ಎಲ್ಲ ಸಚಿವರು, ಶಾಸಕರು ಶಾಮೀಲಾಗಿರುವುದರಿಂದ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.
Karnataka: ಬಿಜೆಪಿ ಅವಧಿಯ ಹಗರಣಗಳ ತನಿಖೆ ಯಾರಿಂದ? SIT ಇಲ್ಲ CID?: ಗೃಹ ಸಚಿವರು ಹೇಳಿದ್ದೇನು?
ಕೊರೊನಾ ವೇಳೆ ಆರೋಗ್ಯ ಇಲಾಖೆಯಲ್ಲಿನ ಅವ್ಯವಹಾರ: ಅಂದಿನ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪ ಎದುರಿಸಿದ್ದರು. ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಾಪಿಸುವ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಲಾಗಿದೆ ಮತ್ತು ಸೌಲಭ್ಯಗಳು ಬಿಲ್‌ಗಳಲ್ಲಿ ಮಾತ್ರ ಲಭ್ಯವಿವೆಯೇ ಹೊರತು ವಾಸ್ತವದಲ್ಲಿಲ್ಲ ಎಂದು ಆರೋಪಿಸಲಾಗಿದೆ.

ಗಂಗಾ ಕಲ್ಯಾಣ ಹಗರಣ: ರಾಜ್ಯದಲ್ಲಿ ವಿವಿಧ ದರಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ ಮತ್ತು ಅನರ್ಹ ಗುತ್ತಿಗೆದಾರರು ನಕಲಿ ದಾಖಲೆಗಳ ಆಧಾರದ ಮೇಲೆ ಕಾಮಗಾರಿಗಳ ಗುತ್ತಿಗೆಗಳನ್ನು ಪಡೆದಿದ್ದಾರೆ. 431 ಕೋಟಿ ರೂಪಾಯಿ ಅಕ್ರಮ ಈ ಹರಗಣದಲ್ಲಿ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪಿಎಸ್‌ಐ ನೇಮಕಾತಿ ಹಗರಣ: ಅಕ್ಟೋಬರ್ 2021 ರಲ್ಲಿ ನಡೆದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಅಭ್ಯರ್ಥಿಗಳಿಂದ ಕೋಟಿಗಟ್ಟಲೆ ಲಂಚ ಪಡೆದಿದ್ದರಿಂದ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಕೇವಲ 21 ಪ್ರಶ್ನೆಗಳನ್ನು ಪ್ರಯತ್ನಿಸಿದ ಅಭ್ಯರ್ಥಿಗಳಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆ ಮುಗಿದ ನಂತರ ಖಾಲಿ ಒಎಂಆರ್ ಶೀಟ್‌ಗಳನ್ನು ಭರ್ತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಬಂಧಿತ ಆರೋಪಿಯಾಗಿದ್ದಾರೆ.

ಪ್ರಾಧ್ಯಾಪಕರ ನೇಮಕ ಹಗರಣ: ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ. ಒಎಮ್‌ಆರ್ ಸೀಟುಗಳನ್ನು ತಿದ್ದುಪಡಿ ಮಾಡಿ ಫಲಿತಾಂಶ ಪ್ರಕಟಿಸಲಾಗಿದೆ. ಇದರಲ್ಲಿ ಲಕ್ಷಗಟ್ಟಲೇ ಹಣ ಪಡೆಯಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಬಿಬಿಎಂಪಿ ಹಗರಣ: ಬೆಂಗಳೂರಿನ ಬಿಬಿಎಂಪಿ ಕಾಮಗಾರಿಯಲ್ಲಿ ಅಕ್ರಮ ಕಂಡುಬಂದಿದೆ. ನೂರಾರು ಕೋಟಿ ರೂಪಾಯಿಗಳ ಕಾಮಗಾರಿಗೆ ನಕಲಿ ಬಿಲ್ ಸೃಷ್ಟಿಸಲಾಗಿದೆ ಎಂಬ ಆರೋಪಗಳು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೆ ವಿರುದ್ಧ ಕೇಳಿ ಬಂದಿವೆ.

ಮತದಾರರ ಮಾಹಿತಿ ಕಳ್ಳತನ ಹಗರಣ: ಬಿಜೆಪಿಯ ಸಚಿವರಿಂದ ಆರ್ಥಿಕ ಬೆಂಬಲ ಹೊಂದಿರುವ ಚಿಲುಮೆ ಸಂಘಟನೆಯು ಮತದಾರರ ಜಾಗೃತಿ ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರ ಪಟ್ಟಿಯಿಂದ 27 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಹುತೇಕ ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಸ್ಯಾಂಟ್ರೋ ರವಿ ಕೇಸ್: ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದ ಸ್ಯಾಂಟ್ರೋ ರವಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಧಿಕಾರಿಗಳ ವರ್ಗಾವಣೆಯನ್ನು ನಿಭಾಯಿಸುವ ಕೆಲಸ ಮಾಡುತ್ತಿದ್ದರು. ಅವರು ಡಿವೈಎಸ್ಪಿಯೊಬ್ಬರಿಗೆ ಬೆದರಿಸುವ ಆಡಿಯೋವೊಂದು ವೈರಲ್ ಆಗಿತ್ತು. ಇದು ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪ್ರಕರಣ: ಮಾರ್ಚ್ 2023 ರಲ್ಲಿ, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರು ಕೆಎಸ್‌ಡಿಎಲ್‌ಗೆ ಸುಗಂಧ ದ್ರವ್ಯಗಳ ಪೂರೈಕೆಗೆ ಟೆಂಡರ್ ನೀಡಿದ್ದಕ್ಕೆ ಸಂಬಂಧಿಸಿದಂತೆ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ವಿರೂಪಾಕ್ಷಪ್ಪ ಅವರು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಅಧ್ಯಕ್ಷರಾಗಿದ್ದರು.
English summary
We Will Probe All Irregularities During BJP Regime, Punish The Guilty says Karnataka CM Siddaramaiah
Story first published: Tuesday, June 27, 2023, 17:49 [IST]