ಬಿಜೆಪಿಯ ದುರಹಂಕಾರ ಹೇಳಿಕೆ; ಪಾಠ ಕಲಿಯಲಿಲ್ಲ ಎಂದರೆ 63 ಮುಂದೆ 6 ಮತ್ತೆ 3 ಕ್ಕೆ ಜನ ತರುತ್ತಾರೆ: ಪ್ರಿಯಾಂಕ್‌ ಖರ್ಗೆ | Minister Priyank kharge Fierce Attack Against BJP Leaders

Karnataka

oi-Reshma P

|

Google Oneindia Kannada News

ಬೆಂಗಳೂರು, ಜೂನ್ 22: ಬಿಜೆಪಿಯ ದುರಹಂಕಾರ, ಜನವಿರೋಧಿ ಹೇಳಿಕೆಗಳಿಂದ, ಈಗಾಗಲೇ ರಾಜ್ಯದ ಜನರು ಅವರನ್ನು 63 ಕ್ಕೆ ತಂದು ನಿಲ್ಲಿಸಿದ್ದಾರೆ. ಇದರಿಂದ ಇನ್ನು ಪಾಠ ಕಲಿಯಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ 6 ಮತ್ತೆ 3 ಕ್ಕೆ ಜನ ತಂದುಬಿಡಬಹುದೇನೋ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕರ್ತವ್ಯನಿರತ ಪೋಲಿಸ್ ಪೇದೆಯ ಮೇಲೆ ಟ್ಯಾಕ್ಟರ್ ಹತ್ತಿಸಿ ಕೊಂದ ಆರೋಪಿ ಪರವಾಗಿ ಬಿಜೆಪಿ ಶಾಸಕ ಅಭ್ಯರ್ಥಿಗಳು ಹಾಗೂ ವಿಧಾನಪರಿಷತ್ ಸದಸ್ಯರ ಪುತ್ರ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಇತರೆ ಬಿಜೆಪಿ ನಾಯಕರು ಮಾತನಾಡುತ್ತಿರುವುದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಈ ಕುರಿತು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿತ್ತು. ರೌಡಿಷೀಟರ್ ಗಳು ಪೊಲೀಸ್ ಅಧಿಕಾರಗಳ ಬರ್ತಡೇ ಪಾರ್ಟಿ ಆಯೋಜನೆ ಉಸ್ತುವಾರಿ ನೋಡಿಕೊಳ್ಳುವಂತಹ ಹೀನಾಯ ಸ್ಥಿತಿ ಬಂದೊದಗಿತ್ತು.

Minister Priyank kharge Fierce Attack Against BJP Leaders

ಬಿಜೆಪಿ ಸರ್ಕಾರದಲ್ಲಿ ಕಲಬುರ್ಗಿ ಜಿಲ್ಲೆಯನ್ನು ಅಕ್ರಮ ದಂಧೆಕೋರರ ಸುರಕ್ಷಿತ ತಾಣವಾಗಿಸಿ ಜಿಲ್ಲೆಯ ಹೆಸರನ್ನು ಮಣ್ಣು ಪಾಲು ಮಾಡಲಾಗಿತ್ತು. ಅದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಂತ ದುರವಸ್ಥೆಯನ್ನು ಬದಲಿಸುವ ಕೆಲಸ ನಡೆಯುತ್ತಿದ್ದು, ಜನರಿಗೆ ಕಾನೂನಿನ ಮೇಲೆ ನಂಬಿಕೆ ಮೂಡಿಸಲಾಗುತ್ತಿದೆ ಎಂದು ಪ್ರಿಯಾಂಕ್‌ ಬರೆದು ಕೊಂಡಿದ್ದಾರೆ.

ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್ ಹಾಕುವ ಕಾರ್ಯಾಚರಣೆ ವ್ಯಾಪಕವಾಗಿ ನಡೆಸಲಾಗಿದೆ. ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ, ಅಕ್ರಮ ದಂಧೆಗಳ ಮೂಲಕ ಹಣ ಸಂಪಾದಿಸಿ ಚುನಾವಣೆ ನಡೆಸುವ ಬಿಜೆಪಿ ಪಕ್ಷದ ನಾಯಕರಿಗೆ ಇದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾಗಾಗಿ, ಈ ಅಕ್ರಮ ನಿಯಂತ್ರಣ ಮಾಡಲು ಮುಂದಾಗಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುವ ವೇಳೆ ಅದನ್ನು ತಡೆಯಲು ಬಂದ ಕರ್ತವ್ಯ ನಿರತ ಪೊಲೀಸ್ ಪೇದೆಯ ಮೇಲೆ ಟ್ರಾಕ್ಟರ್ ಹತ್ತಿಸಿ ಕೊಲೆ ಮಾಡಲಾಗಿದೆ.

ಹೀಗೆ ಕೊಂದವರ ಬೆನ್ನು ಬಿದ್ದ ಪೋಲೀಸ್ ಇಲಾಖೆ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಪರಾರಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಹಿಡಿದು ತರುವಾಗ ಆತ ಪೊಲೀಸ ಅಧಿಕಾರಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ತನಿಖೆ ವೇಳೆ ಈ ಕೊಲೆ ಆರೋಪಿ ಅಫಜಲ್ಪುರ ಬಿಜೆಪಿ ಮುಖಂಡನಾಗಿರುವುದು, ಚುನಾವಣೆಯಲ್ಲಿ ಹಲವಾರು ಬಿಜೆಪಿ ಅಭ್ಯರ್ಥಿಗಳು ಹಾಗೂ ನಾಯಕರೊಂದಿಗೆ ಕೆಲಸ ಮಾಡಿದ್ದು ತಿಳಿದುಬಂದಿದೆ ಎಂದು ಸಚಿವರು ಹೇಳಿದ್ದಾರೆ.

ಮೃತ ಪೊಲೀಸ್ ಪೇದೆಯ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಲಾಗುತ್ತದೆ. ಈ ನಡುವೆ, ಕಾಂಗ್ರೆಸ್ ಪಕ್ಷದ ನಾಯಕರ ನಿಯೋಗದೊಂದಿಗೆ ತಾವೇ ಖುದ್ದಾಗಿ ಭೇಟಿ ಮಾಡಿ ಪಕ್ಷದ ವತಿಯಿಂದ ರೂ ಒಂದು ಲಕ್ಷ ಪರಿಹಾರ ನೀಡಿರುವುದಾಗಿ ಹೇಳಿರುವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕನ ಕೈಯಿಂದ ಕೊಲೆಯಾದ ಪೊಲೀಸ್ ಪೇದೆಯ ಕುಟುಂಬಕ್ಕೆ ಕ್ಷಮೆ ಕೇಳುವುದಿರಲಿ, ಅತ್ತ ಕಡೆ ತಿರುಗಿಯೂ ನೋಡಿಲ್ಲ ಎಂದು ಟೀಕಿಸಿದ್ದಾರೆ.

ರಾಜ್ಯ ನಾಯಕರು ಕೊಲೆ ಆರೋಪಿಗಳ ರಾಜಕೀಯ ಹಿನ್ನಲೆ ಪತ್ತೆಯಾಗುವವರೆಗೆ ಮತ್ತೆ ಹೆಣದ ಮೇಲೆ ರಾಜಕಾರಣ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದರು. ಆದರೆ ಕೊಲೆ ಆರೋಪಿ ಬಿಜೆಪಿಯವನು ಎಂದು ಗೊತ್ತಾದ ತಕ್ಷಣ ಇವರೆಲ್ಲರ ಬಾಯಿಗೆ ಬೀಗ ಬಿದ್ದಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್ ಅಶೋಕ್, ಮಾಜಿ ಸಚಿವ ಆರಗ ಜ್ಞಾನೇಂದ್ರ ರವರೇ, ಈಗ ನಿಮ್ಮದೇ ಪಕ್ಷದ ಅಭ್ಯರ್ಥಿ, ನಿಮ್ಮ MLC ಪುತ್ರ, ಬಿಜೆಪಿ ಜಿಲ್ಲಾಧ್ಯಕ್ಷರೆಲ್ಲಾ ಈ ಕೊಲೆಗಾರನ ಪರವಾಗಿ ಮಾತನಾಡುತ್ತಿದ್ದಾರೆ. ಇವರಿಗೆ ಏನು ಹೇಳ್ತೀರಾ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ನಿಮ್ಮ ಪಕ್ಷದ ಮುಖಂಡನಿಂದ ಪೊಲೀಸ್ ಪೇದೆ ಕೊಲೆಯಾಗಿರುವಾಗ ಅವರ ಕುಟುಂಬಕ್ಕೇ ಕ್ಷಮೆ ಕೇಳುವ ಮಾನವೀಯತೆ ಕೂಡ ನಿಮ್ಮಲ್ಲಿ ಕೊರತೆಯಾಯಿತೇ? ತಮ್ಮಿಂದಾಗಿರುವ ತಪ್ಪುಗಳಿಗೆ ಬಿಜೆಪಿ ನಾಯಕರು ಜನರ ಬಳಿ ಕ್ಷಮೆ ಕೇಳಿ ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಂಡು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿ ಎಂದು ನಾನು ಆಗ್ರಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

English summary

BJP batting in favor of cop murder accused; Minister Priyank kharge attacks BJP,

Story first published: Thursday, June 22, 2023, 16:27 [IST]

Source link