Jobs
oi-Gururaj S

ಬೆಂಗಳೂರು, ಜೂನ್ 19; ಕರ್ನಾಟಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕ ಮಾಡಲು ಮುಂದಾಗಿದೆ. ಶೀಘ್ರವೇ ಈ ಕುರಿತು ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.
ಪಿಡಿಒಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಗ್ರಾಮೀಣ ಮಟ್ಟದಲ್ಲಿ ಕೆಲಸಗಳು ಬೇಗ ಆಗುತ್ತಿಲ್ಲ ಎಂಬ ಆರೋಪಗಳ ಹಿನ್ನಲೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡಿದೆ. ಆದ್ದರಿಂದ ಕೆಲವೇ ದಿನಗಳಲ್ಲಿ ಅಧಿಸೂಚನೆ ಪ್ರಕಟವಾಗಲಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿಗೆ ಆದೇಶ

ಸರ್ಕಾರ ಪಿಡಿಒ, ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1), ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್-2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕ ಮಾಡಲಿದೆ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕಾಗಿ ಪ್ರಾಥಮಿಕ ಹಂತದ ಕಾರ್ಯಗಳನ್ನು ಈಗಾಗಲೇ ಪ್ರಾರಂಭ ಮಾಡಲಾಗಿದೆ.
ನರೇಗಾ ಅಡಿ ಕೆಲಸ ನೀಡಿ ಗುಳೆ ತಡೆದ ಕೊಪ್ಪಳ ಜಿಲ್ಲಾ ಪಂಚಾಯಿತಿ
ಮಾಹಿತಿ ಸಂಗ್ರಹ; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತಾಲಯದ ನಿರ್ದೇಶಕರು ಎಲ್ಲಾ ಜಿಲ್ಲಾ ಪಂಚಾಯಿತಿ ಸಿಇಒಗಳಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಸಂಗ್ರಹ ಮಾಡಿದ್ದಾರೆ. ಜೂನ್ 17ರಂದು ಮಾಹಿತಿ ಸಲ್ಲಿಕೆಯಾಗಿದೆ.
4055 ಅತಿಥಿ ಉಪನ್ಯಾಸಕರ ನೇಮಕಾತಿ; ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು?
ಆಯುಕ್ತಾಲಯದಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಿ, ಎಷ್ಟು ಹುದ್ದೆಗಳ ಭರ್ತಿಗೆ ಅನುಮತಿ ಸಿಗಲಿದೆ ಎಂಬುದನ್ನು ನೋಡಿಕೊಂಡು ಅಧಿಸೂಚನೆ ಪ್ರಕಟಿಸಲಾಗುತ್ತದೆ. ವಿವಿಧ ಕಾರಣಗಳಿಂದ ಪಿಡಿಒ, ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1), ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್-2) ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳು ಖಾಲಿಯಾಗಿವೆ.

ಈ ಹಿಂದಿನ ಬಿಜೆಪಿ ಸರ್ಕಾರ 570 ಪಿಡಿಒ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಹೇಳಿತ್ತು. ಆ ಬಳಿಕ ಚುನಾವಣೆ ಸಿದ್ಧತೆ, ಚುನಾವಣಾ ವೇಳಾಪಟ್ಟಿ, ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆಗಳು ನಡೆಯಲಿಲ್ಲ. ಆದರೆ ಈಗ ಹೊಸ ಸರ್ಕಾರ ನೇಮಕಾತಿಗೆ ಮುಂದಾಗಿದೆ.
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ 18 ರಿಂದ 35 ವರ್ಷಗಳ ವಯೋಮಿತಿಯ ಅಭ್ಯರ್ಥಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗೆ ಅರ್ಜಿ ಹಾಕಲು ಅರ್ಹರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗೂ ಇದೇ ವಿದ್ಯಾರ್ಹತೆ ಇರುತ್ತದೆ.
2023ರ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಕಲಾಪದಲ್ಲಿ ಅಂದಿನ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಪ್ರಶ್ನೆಯೊಂದಕ್ಕೆ ಉತ್ತರ ನೀಡುವಾಗ 570 ಪಿಡಿಒ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಆಗ ಸ್ಥಳೀಯ ಆಡಳಿತ ಸುಗಮವಾಗಿ ಸಾಗಲು ಅನುಕೂಲವಾಗಲಿದೆ ಎಂದು ಹೇಳಿದ್ದರು.
ಪಿಡಿಒ ಹುದ್ದೆಗಳು ಖಾಲಿ ಇರುವುದರಿಂದ ಒಬ್ಬರು ಪಿಡಿಒ 2-3 ಪಂಚಾಯಿತಿಗಳ ಕಾರ್ಯಭಾರ ನೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಅವರಿಗೂ ಕೆಲಸದ ಹೊರೆ ಹೆಚ್ಚಿದ್ದು, ಜನರಿಗೂ ಸಹ ಅವರನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ ಎಂಬ ಚರ್ಚೆ ನಡೆದಿತ್ತು. ಆಗಲೇ ಪಿಡಿಒ ನೇಮಕದ ಕುರಿತು ಮಾತುಕತೆ ನಡೆದಿತ್ತು. ಬಳಿಕ ಚುನಾವಣೆ ಎದುರಾಯಿತು.
ಈಗ ಕರ್ನಾಟಕದಲ್ಲಿ ಸುಮಾರು 750 ಪಿಡಿಒ ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ಪಿಡಿಒ ಹುದ್ದೆಗೆ 36 ಸಾವಿರ ರೂ. ತನಕ ವೇತನ ನಿಗದಿ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದ ಬಳಿಕ ನೇಮಕಾತಿ ಕುರಿತು ಅಂತಿಮ ತೀರ್ಮಾನವನ್ನು ಹಣಕಾಸು ಇಲಾಖೆ ಕೈಗೊಳ್ಳಲಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್‌ನಲ್ಲಿ ಅವರು ಪಿಡಿಒಗಳ ನೇಮಕದ ಕುರಿತು ಅಂತಿಮ ಘೋಷಣೆಯನ್ನು ಮಾಡುವ ತೀರ್ಮಾನ ಘೋಷಣೆ ಮಾಡುವ ಸಾಧ್ಯತೆಯೂ ಇದೆ.
English summary
Karnataka government may issue notification for the panchayat development officer recruitment soon.