Karnataka
oi-Shankrappa Parangi

ಬೆಂಗಳೂರು, ಜೂನ್ 27: ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ವತಿಯಿಂದ ಹಂಚಿಕೆಯಾಗಿರುವ ನಿವೇಶನಗಳಿಗೆ ಸಂಬಂಧಿಸಿದ ಕೋರ್ಟ್ ಪ್ರಕರಣಗಳ ಅಂಕಿಸಂಖ್ಯೆ, ಅವುಗಳ ಸ್ಥಿತಿಗತಿ, ಸ್ವಾಧೀನ ಪ್ರಕ್ರಿಯೆಯಲ್ಲಿ ಆಗಿರುವ ಲೋಪಗಳು ಬಗ್ಗೆ ಜುಲೈ 17ರ ವೇಳೆಗೆ ಸಮಗ್ರ ವರದಿ ಸಲ್ಲಿಸಬೇಕು. ಹೀಗೆಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಕರಣ ಸಂಬಂಧ ಕೈಗಾರಿಕೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮಂಗಳವಾರ ಸುದೀರ್ಘ ಸಭೆ ನಡೆಸಿದ ಎಂಬಿ ಪಾಟೀಲರು, ಕೆಐಎಡಿಬಿ ನಿವೇಶನ ಹಂಚಿಕೆ ಸಂಬಂಧ ಕಳೆದ 4-5 ವರ್ಷಗಳಲ್ಲಿ 1,748 ಮೊಕದ್ದಮೆಗಳು ದಾಖಲಾಗಿವೆ. ಈ ಪೈಕಿ 921 ಪ್ರಕರಣಗಳ ವಿಚಾರಣೆ ನಡೆಯುತ್ತಿವೆ.

ಒಟ್ಟು ಪ್ರಕರಣಗಳ ಪೈಕಿ 762 ಕೇಸ್‌ಗಳಲ್ಲಿ ಸರ್ಕಾರ ಪರ ಆದೇಶ ಬಂದಿದೆ. ಆದರೆ, ಸರ್ಕಾರ ಹಿತಾಸಕ್ತಿ ಇರುವ ಕೆಲವು ಪ್ರಕರಣಗಳಲ್ಲಿ ನಾವು ಮೇಲ್ಮನವಿಯನ್ನೇ ಸಲ್ಲಿಸಿಲ್ಲ. ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಎಲ್ಲವನ್ನೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಯ ಗಮನಕ್ಕೆ ತಂದು, ಸಲಹೆ ಪಡೆಯಬೇಕು. ಜೊತೆಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನೂ ಕೇಳಬೇಕು ಎಂದು ಹೇಳಿದರು.
ಅಧಿಸೂಚನೆಯನ್ನೇ ಹೊರಡಿಸಿಲ್ಲ: ಸಚಿವರು ಗರಂ
ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 10 ವರ್ಷಗಳ ಹಿಂದೆಯೇ 92 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದರೂ ಅಂತಿಮ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಇದು ಈಗ ಕಗ್ಗಂಟಾಗಿದೆ. ಇದರಲ್ಲಿ ಕೆಲವರು ಅಧಿಸೂಚನೆಯ ಪರವಾಗಿದ್ದರೆ, ಕೆಲವರು ವಿರೋಧಿಸುತ್ತಿದ್ದಾರೆ. ಇದನ್ನು ಸಮಗ್ರವಾಗಿ ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ಬಗೆಹರಿಸಬೇಕು. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸರಿಯಾದ ವಿಧಿವಿಧಾನ ಅನುಸರಿಸದೆ ಇರುವುದೇ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಲು ಕಾರಣವಾಗಿವೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.
Monsoon Delay: ನೀರಿನ ಕೊರತೆ ಬಗ್ಗೆ ಮಹತ್ವದ ಸಭೆ, ಅಧಿಕಾರಿಗಳಿಗೆ ಎಂಬಿ ಪಾಟೀಲ್ ತಾಕೀತು
ಕೈಗಾರಿಕೆಗಳ ಬಳಕೆಗೆಂದು ಸರ್ಕಾರ ಬಳಿ ಈಗ 11,000 ಎಕರೆ ಭೂಮಿ ಇದೆ. ಇದರ ಮೌಲ್ಯ 8 ರಿಂದ 10 ಸಾವಿರ ಕೋಟಿ ರೂಪಾಯಿ ಆಗುತ್ತದೆ. ರಾಜ್ಯದಲ್ಲಿ ಎಲ್ಲೆಂದರಲ್ಲಿ ಕೈಗಾರಿಕಾ ಪ್ರದೇಶಗಳನ್ನು ಮಾಡುವ ಬದಲು ಬೇಡಿಕೆ ಆಧರಿಸಿ ಮಾಡಬೇಕು. ಇದರಲ್ಲಿ ರಾಜಕೀಯ ಒತ್ತಡಕ್ಕೆ ಮಣಿಯಬಾರದು.

ಇದಷ್ಟೇ ಅಲ್ಲದೇ ಒಂದು ನಿರ್ದಿಷ್ಟ ಮಾದರಿಯ ಉದ್ಯಮಗಳಿಗೆ ಮೀಸಲಿಟ್ಟಿರುವ ಜಾಗಗಳಲ್ಲಿ ಅಂತಹ ಉದ್ದಿಮೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಾರದಿದ್ದರೆ, ಅಲ್ಲಿರುವ ಜಾಗವನ್ನು ಉಳಿದ ಉದ್ದಿಮೆಗಳಿಗೂ ಒದಗಿಸುವ ನೀತಿಯನ್ನು ಅಳವಡಿಸಿ ಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕು
ರಾಜ್ಯದಲ್ಲಿ ಅಗತ್ಯ ಆಧಾರಿತ ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕು. ಇಲ್ಲದೆ ಹೋದರೆ ಎಲ್ಲವೂ ಬರೀ ಭೂಸ್ವಾಧೀನದ ಹಂತದಲ್ಲೇ ನಿಂತು ಹೋಗುತ್ತದೆ. ನಮ್ಮಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ವಶಪಡಿಸಿಕೊಂಡಿರುವ ಜಮೀನು ದಶಕಗಳ ನಂತರವೂ ಹಾಗೆಯೇ ಉಳಿದುಕೊಂಡಿರುವುದಕ್ಕೆ ಇದೇ ಮೂಲ ಕಾರಣವಾಗಿದೆ ಎಂದು ಪಾಟೀಲ ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಆಯುಕ್ತ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
English summary
MB Patil instructs officials to provide all information including number and status of KIADB cases in court by July 17.
Story first published: Tuesday, June 27, 2023, 18:55 [IST]