ಧಮ್ಮಿದ್ದರೆ ತಲಾ 15 ಕೆಜಿ ಅಕ್ಕಿ ಕೊಡಿ: ಬೊಮ್ಮಾಯಿ ಹೀಗೆ ಆಗ್ರಹಿಸಿದ್ದೇಕೆ? | Karnataka Congress Govt Should Give 15 Kg Rice Per Person, Demand By Basavaraj Bommai

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 20: ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧಮ್ಮಿದ್ದರೆ, ತಾಕತ್ತಿದ್ದರೆ ಎಲ್ಲ ಕಡೆಯಿಂದ ಅಕ್ಕಿ ಶೇಖರಿಸಿ ನಿಮ್ಮ ಸರ್ಕಾರದ್ದು 10 ಕೆಜಿ ಜೊತೆ ಕೆಂದ್ರದ 5 ಕೆಜಿ ಅಕ್ಕಿ ಸೇರಿಸಿ ಪ್ರತಿಯೊಬ್ಬರಿಗೆ 15 ಕೆಜಿ ಅಕ್ಕಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದರು.

ಬಿಜೆಪಿ ವತಿಯಿಂದ ಮಂಗಳವಾರ ನಗರದ ಆನಂದ ರಾವ್ ವೃತ್ತದ ಬಳಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದಾಗ ಅವರನ್ನು ಪೊಲೀಸರು ಬಂಧಿಸಿದರು.

Karnataka Congress Govt Should Give 15 Kg Rice Per Person, Demand By Basavaraj Bommai

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಒಂದು ಕುಟುಂಬದಲ್ಲಿ 5 ಜನರಿದ್ದರೆ 75 ಕೆಜಿ ಕೊಡಬೇಕು. ಅದನ್ನು ಮಾಡದೆ ಪ್ರತಿಭಟಿಸುತ್ತೀರಾ? ನಿಮಗೆ ಅಧಿಕಾರ ಕೊಟ್ಟದ್ದು ಪ್ರತಿಭಟನೆ ಮಾಡಲಿಕ್ಕಾಗಿಯೇ? ಎಂದು ಅವರು ಪ್ರಶ್ನಿಸಿದರು. ಇದೊಂದು ಸುಳ್ಳ- ಮಳ್ಳ ಸರ್ಕಾರ. ಸುಳ್ಳು ಹೇಳುವುದು ಮತ್ತು ಮೋಸ ಮಾಡುವ ಸರ್ಕಾರ ಇದೆ ಎಂದು ಟೀಕಿಸಿದರು.

ನಿಮಗೆ ನಾಚಿಕೆ ಇಲ್ಲವೇ? ಜವಾಬ್ದಾರಿ ಇಲ್ಲವೇ? ಎಂದು ಕೇಳಿದರಲ್ಲದೆ, ಇದೊಂದು ಬೇಜವಾಬ್ದಾರಿ ಸಕಾಕಾರ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಕರೆಂಟ್ ಶಾಕ್ ಕೊಡುತ್ತಿದೆ. ಇವತ್ತು ಇವರು ಕೊಟ್ಟ ಬಿಲ್ಲನ್ನು ಬಡವರು, ಕೈಗಾರಿಕೆದಾರರು ಸೇರಿ ಯಾರಿಗೂ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.

Karnataka Congress Govt Should Give 15 Kg Rice Per Person, Demand By Basavaraj Bommai

ಕಾಂಗ್ರೆಸ್ ಸರ್ಕಾರವೇ ವಿದ್ಯುತ್ ದರ ಏರಿಕೆ ಮಾಡಿದೆ. ವಿದ್ಯುತ್ ದರ ದುಪ್ಪಟ್ಟು ಏರಿಕೆ ಆಗಿದೆ. ಮನಸ್ಸು ಮಾಡಿದರೆ ಅದನ್ನು ಏರಿಸದೆ ಇರಬಹುದಿತ್ತು. ಯಾಕೆ ಸ್ವಾಮೀ ಬಡವರ ಬಗ್ಗೆ ಮಾತನಾಡಿ ಅಧಿಕಾರ ಪಡೆದ ನೀವು ಬಡವರಿಗೆ ಮೋಸ ಮಾಡುತ್ತಿದ್ದೀರಿ ಎಂದರು.

ಬಸ್‌ಗಳು, ವಿದ್ಯುತ್ ಇಲ್ಲದೇ ಕೈಗಾರಿಕೆಗಳು ನಿಲ್ಲಲಿವೆ?

ಮುಂದೆ ಬಸ್‌ಗಳು ನಿಂತು ಹೋಗಲಿವೆ. ಶಾಲಾ ಮಕ್ಕಳಿಗೆ ಬಸ್ಸಿಲ್ಲದೆ ಮುಷ್ಕರ ಮಾಡುತ್ತಿದ್ದಾರೆ ಎಂದು ಗಮನ ಸೆಳೆದರು.

ಒಂದೆಡೆ ಬಸ್ಸುಗಳು ನಿಲ್ಲುತ್ತಿವೆ. ಇನ್ನೊಂದೆಡೆ ವಿದ್ಯುತ್ ಶಾಕ್‌ನಿಂದ ಕೈಗಾರಿಕೆಗಳು ನಿಲ್ಲಲಿವೆ. ಕುಡಿಯುವ ನೀರೂ ಸಿಗುತ್ತಿಲ್ಲ. ಕೇವಲ ಒಂದೂವರೆ ತಿಂಗಳಲ್ಲಿ ರಾಜ್ಯದ ಪ್ರಗತಿ ಹಳಿ ತಪ್ಪಿದೆ. ಕೆಲಸಗಳ ಹಣ ಪಾವತಿ ಆಗುತ್ತಿಲ್ಲ. ಕಾಂಗ್ರೆಸ್ ಕಮಿಷನ್ ನಿಗದಿಪಡಿಸಲು ಸಚಿವರು ಮುಂದಾಗಿದ್ದಾರೆ. ಅಧಿಕಾರಿಗಳನ್ನು ಕರೆದು ಮಂತ್ಲಿ ಫಿಕ್ಸ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ದಂಧೆ ಶುರುವಾಗಿದೆ. ಇದೊಂದು ಜನವಿರೋಧಿ, ಬಡವರ ವಿರೋಧಿ, ರೈತರ ವಿರೋಧಿ ಸರ್ಕಾರವಾಗಿದೆ. ನಮ್ಮನ್ನು ಬಂಧಿಸುವ ಮೂಲಕ ಪೊಲೀಸ್ ರಾಜ್ಯ ಪ್ರಾರಂಭ ಆಗಿದ್ದನ್ನು ಸಾಬೀತು ಮಾಡಿದ್ದೀರಿ, ಸರ್ಕಾರ ಧಮನಕಾರಿ ನೀತಿ ಅನಸುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಪೊಲೀಸ್ ರಾಜ್ಯಕ್ಕೆ ಹೆದರುವುದಿಲ್ಲ. ನಿಮ್ಮ ಲಾಠಿಯಲ್ಲಿ ಶಕ್ತಿ ಇದೆಯೋ, ನಮ್ಮ ರಟ್ಟೆಯಲ್ಲಿ ಶಕ್ತಿ ಇದೆಯೋ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನಮ್ಮ ಹೋರಾಟ ವಿಧಾನಸಭೆ ಒಳಗೆ ಮತ್ತು ಹೊರಗೆ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.

ಸುಳ್ಳು ಸರ್ಕಾರದಿಂದ ಪಾಠ ಕಲಿಯಬೇಕಿಲ್ಲ

ಕಾಂಗ್ರೆಸ್‌ನವರು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಇವರ ಕೈಯಲ್ಲಿ ಒಂದು ಕೆಜಿ ಅಕ್ಕಿ ಕೊಡಲು ಸಾಧ್ಯವಾಗಿಲ್ಲ. 5 ಕೆಜಿ ಕೊಡುವುದು ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಅಕ್ಕಿ ಎಂದು ವಿವರಿಸಿದರು. ಬಡವರಿಗೆ ಈಗ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದೆ. 10 ಕೆಜಿ ಅಕ್ಕಿಯನ್ನು ಗರೀಬ್ ಕಲ್ಯಾಣ್ ಯೋಜನೆಯಡಿ ಸುಮಾರು 2 ವರ್ಷ ಕೊಟ್ಟಿದ್ದಾರೆ. ಈ ಸುಳ್ಳು ಕಾಂಗ್ರೆಸ್ಸಿನಿಂದ ನಾವು ಪಾಠ ಕಲಿಯಬೇಕಿಲ್ಲ. ಕೋವಿಡ್, ಅಕ್ಕಿ ವಿತರಣೆ, ಪ್ರವಾಹ ಬಂದಾಗ ಕೇಂದ್ರವು ನೆರವಿಗೆ ಧಾವಿಸಿದೆ ಎಂದು ಬೊಮ್ಮಾಯಿ ಬಿಜೆಪಿ ಸಾಧನೆ ಬಗ್ಗೆ ವಿವರಿಸಿದರು.

ಆಪತ್ತು ಬಂದಾಗ ನರೇಂದ್ರ ಮೋದಿ ಸರ್ಕಾರ ನೆರವಿಗೆ ಬಂದಿತ್ತು. ಜನರು ನಿಮ್ಮ ಸುಳ್ಳು ಭರವಸೆ, ಸುಳ್ಳು ಗ್ಯಾರಂಟಿಗಳ ಜೊತೆ ಸುಳ್ಳು ನೆಪವನ್ನು ಗಮನಿಸಿದ್ದಾರೆ. ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಎಂದಿದ್ದರು. ತಾತ್ವಿಕ ಒಪ್ಪಿಗೆ, ನಂತರ ಜುಲೈ 1ರಿಂದ ಎಂದು ಸುಳ್ಳು ಹೇಳಿದ್ದಾರೆ. ಆಗಲೂ ತಯಾರಿ ಮಾಡಲೇ ಇಲ್ಲ. ಈಗ ಕೇಂದ್ರ ಅಕ್ಕಿ ಕೊಡುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದೀರಿ. ಕೇಂದ್ರ ತನ್ನ ಪಾಲನ್ನು ಕೊಟ್ಟಿದೆ ಎಂದು ಮಾಃಹಿತಿ ನೀಡಿದರು.

ಅಕ್ಕಿ ವಿತರಣೆ ಮುಂದೂಡಲು ಮೋದಿ ಹೆಸರು ಪ್ರಸ್ತಾಪ

ಇದೇ ವೇಳೆ ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಸರ್ಕಾರವು ಇಂದು ನಮ್ಮನ್ನು ಬಂಧಿಸಿದೆ, ಇದು ಅಕ್ಷಮ್ಯ ಎಂದು ಟೀಕಿಸಿದರು. 10 ಕೆಜಿ ಅಕ್ಕಿ ಸುಳ್ಳು. ಮೋದಿಜಿ ಅವರ ಅಕ್ಕಿ ಮಾತ್ರ ಗ್ಯಾರಂಟಿ. ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸುಳ್ಳುಗಳನ್ನೇ ಹೇಳುತ್ತಿದ್ದಾರೆ. ಗ್ಯಾರಂಟಿಗಳನ್ನು ಕಂಡಿಷನ್ ಮೇಲೆ ಜಾರಿ ಮಾಡುತ್ತಿದ್ದಾರೆ. ಕಾಂಗ್ರೆಸ್‍ನದ್ದು ಮಾತು ತಪ್ಪಿದ, ಮೋಸ ಮಾಡುವ ಸರ್ಕಾರ. ವಂಚನೆಯ ಸರ್ಕಾರವಾಗಿದ್ದರಿಂದಲೇ ಅಕ್ಕಿ ಕೊಡುವುದನ್ನು ಮುಂದೂಡಲು ಮೋದಿಯವರ ಹೆಸರನ್ನು ತರುತ್ತಿದ್ದಾರೆ ಎಂದು ಅವರು ದೂರಿದರು.

ನೀವು ಕೆಲಸ ಮಾಡಲು ನಾಲಾಯಕ್ ಮತ್ತು ನೀವು ಕೆಲಸಕ್ಕೆ ಬಾರದವರು. ಸಚಿವರು ಮಾಡೋ ಕೆಲಸ ಬಿಟ್ಟು ಬೇರೆಲ್ಲ ಮಾಡ್ತಾರೆ ಎಂದು ಅವರದೇ ಪಕ್ಷದ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ ಎಂದು ನೆನಪಿಸಿದರು.

ಪ್ರತಿಭಟನೆ ವೇಳೆ ಶಾಸಕರಾದ ಮುನಿರಾಜು, ಎಂ.ಕೃಷ್ಣಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಎನ್ ರವಿಕುಮಾರ್, ವಿಧಾನ ಪರಿಷತ್ತಿನ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷರಾದ ಮಂಜುನಾಥ್, ನಾರಾಯಣಗೌಡ ಮತ್ತಿತರ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

English summary

Basavaraj Bommai has demanded that Congress government CM Siddaramaiah should give 15 kg of rice to one person if he has courage.

Story first published: Tuesday, June 20, 2023, 16:51 [IST]

Source link