Bengaluru
oi-Shankrappa Parangi

ಬೆಂಗಳೂರು, ಜೂನ್ 20: ಬಿಜೆಪಿಯವರು ಕೇಂದ್ರದ ಮಾಜಿ ಸಚಿವ ದಿ.ಅನಂತ್ ಕುಮಾರ್ ಅವರನ್ನು ಮರೆತಂತಿದೆ. ಅಂತವರನ್ನು ನೋಡಿ ಇವರು ಕಲಿಯಬೇಕು. ಏಕೆಂದರೆ ನನ್ನ ಮತ್ತು ಬ್ರಾಹ್ಮಣರ ನಡುವಿನ ಸಂಬಂಧ ಎಷ್ಟೊಂದು ಮಧುರವಾಗಿದೆ ಎನ್ನುವುದನ್ನು ಒಮ್ಮೆ ವಿಜಯಪುರಕ್ಕೆ ಬಂದು ನೋಡಲಿ ಎಂದು ಬಿಜೆಪಿ ಸಂಸದರಿಗೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ನೀಡಿದರು.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ನಾನು ಬಿ ಎಲ್ ಸಂತೋಷ್ ಅವರ ಬಗ್ಗೆ ಮಾತನಾಡಿದ ತಕ್ಷಣ ಅದು ಇಡೀ ಬ್ರಾಹ್ಮಣ ಸಮುದಾಯವನ್ನು ಬೈದಂತಲ್ಲ. ನನ್ನ ಮತ್ತು ಬ್ರಾಹ್ಮಣರ ನಡುವಿನ ಸಂಬಂಧ ಎಷ್ಟೊಂದು ಮಧುರವಾಗಿದೆ. ಸಂಸದ ಪ್ರತಾಪ್ ಸಿಂಹ ಅವರು ದಿನವೂ ನನ್ನ ವಿರುದ್ಧ ವೈಯಕ್ತಿಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಅವರ ಮನಃಸ್ಥಿತಿ ತುಂಬಾ ಚಿಂತಾಜನಕವಾಗಿರುವಂತಿದೆ ಎಂದು ಟಾಂಗ್ ನೀಡಿದರು.

ಈ ಹಿಂದೆ ಬಿಜೆಪಿಯ ನಾಯಕ ದಿ.ಅನಂತ ಕುಮಾರ್ ಅವರು ಕೇಂದ್ರದ ಮಂತ್ರಿಗಳಾಗಿದ್ದರು. ಆಗ ನಾನು ರಾಜ್ಯದಲ್ಲಿ ನೀರಾವರಿ ಸಚಿವನಾಗಿದ್ದೆ. ನಮ್ಮ ರಾಜ್ಯದ ಕೆಲಸಗಳ ಮೇಲೆ ಹೋದಾಗ ಅವರು ಪಕ್ಷದ ಮಿತಿಯನ್ನು ಮೀರಿ, ಕರ್ನಾಟಕದ ಹಿತವನ್ನು ಕಾಯುತ್ತಿದ್ದರು. ನಮ್ಮನ್ನು ಎಲ್ಲಾ ಸಚಿವರು ಮತ್ತು ಅಧಿಕಾರಿಗಳ ಬಳಿಗೆ ಕೊಂಡೊಯ್ಯುತ್ತಿದ್ದರು. ಪ್ರತಾಪ್ ಸಿಂಃ ಥರದವರು ಅಂಥವರಿಂದ ಕಲಿಯಬೇಕಾಗಿದೆ. ಆದರೆ, ಬಿಜೆಪಿಯವರಿಗೆ ಈಗ ಅನಂತಕುಮಾರ್ ಅವರ ನೆನಪೂ ಇಲ್ಲ ಎಂದು ಕುಟುಕಿದರು.
ಬಾಲ್ಯದಿಂದಲೂ ಬ್ರಾಹ್ಮಣರ ಜತೆ ಉತ್ತಮ ಸಂಬಂಧ
ನಮ್ಮ ಬಿಎಲ್‌ಡಿಇ ಸಂಸ್ಥೆಯಿಂದ ಬ್ರಾಹ್ಮಣರಾದ ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಸಂಪಾದಕತ್ವದಲ್ಲಿ ಆದಿಲ್‌ಶಾಹಿ ಸಂಪುಟಗಳನ್ನು ತಂದೆವು. ಇನ್ನೂ ಸಾಹಿತ್ಯದ ಸಮಗ್ರ ಸಂಪುಟ ತರುತ್ತಿದ್ದೇವೆ. ಹಾಗೆಯೇ ನಮ್ಮ ಸಂಸ್ಥೆಯಲ್ಲಿ ಸಾಕಷ್ಟು ಬ್ರಾಹ್ಮಣರಿದ್ದಾರೆ.
ನನಗೆ ಚಿಕ್ಕಂದಿನಲ್ಲಿ ಪಾಠ ಕಲಿಸಿದ ದೇಶಪಾಂಡೆ, ಹನಮಂತರಾವ್ ಅವರೆಲ್ಲರು ಬ್ರಾಹ್ಮಣರೇ. 1998ರಲ್ಲಿ ನಾನು ಲೋಕಸಭೆ ಚುನಾವಣೆಗೆ ನಿಂತು ಗೆದ್ದಾಗ ವಿಜಯಪುರ ಕ್ಷೇತ್ರದ ಒಂದು ಲಕ್ಷಕ್ಕಿಂತಲೂ ಹೆಚ್ಚು ಬ್ರಾಹ್ಮಣ ಮತದಾರರ ಪೈಕಿ ಶೇಕಡ 90ರಷ್ಟು ಜನ ನನಗೆ ಮತ ಚಲಾಯಿಸಿದ್ದರು ಎಂದು ಟೀಕೆಗಳಿಗೆ, ಆರೋಪಗಳಿಗೆ ಅವರು ಉತ್ತರಿಸಿದರು.

ನಮ್ಮ ತಂದೆ ಮತ್ತು ನಾನು ಬ್ರಾಹ್ಮಣರ ಜತೆ ಮಧುರ ಸಂಬಂಧಕ್ಕೆ ಹೆಸರಾಗಿದ್ದೇವೆ. ಹಲಗಲಿಯ ದೇವಸ್ಥಾನ, ವಿಜಯಪುರದ ಹನುಮಂತನ ದೇವಸ್ಥಾನ ಸೇರಿದಂತೆ ಬ್ರಾಹ್ಮಣ ಸಮುದಾಯದ ಅನೇಕ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಹಾಗೆಯೇ ಆ ಸಮಾಜವೂ ನನ್ನೊಂದಿಗೆ ಅಭಿಮಾನದಿಂದ ಗುರುತಿಸಿಕೊಂಡಿದೆ. ಇವೆಲ್ಲ ಗೊತ್ತಿಲ್ಲದೆ ಪ್ರತಾಪ್ ಸಿಂಹ ಕೀಳು ಅಭಿರುಚಿಯ ವಿಕೃತಿಯನ್ನು ತೋರಿಸುತ್ತಿದ್ದಾರೆ. ಇನ್ನುಮುಂದೆ ನಾನು ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ನೇರವಾಗಿ ಹೊಡೆಯುವ ತಾಕತ್ತು ನನಗಿದೆ
ಸಿಎಂ ಸಿದ್ದರಾಮಯ್ಯನವರು ನನ್ನ (ಎಂಬಿ ಪಾಟೀಲ್) ಹೆಗಲ ಮೇಲೆ ಬಂದೂಕನಿಟ್ಟು ಬೇರೆಯವರತ್ತ ಹೊಡೆಯುತ್ತಿದ್ದಾರೆ ಎಂದು ಪ್ರತಾಪ್ ಸಿಂಹ್ ಅವರು ಹೇಳಿದ್ದಾರೆ. ನಾನು ವಿಜಯಪುರದವನು. ಯಾರಿಗಾದರೂ ಹೊಡೆಯಬೇಕೆನಿಸಿದರೆ ನೇರವಾಗಿ ಹೊಡೆಯುವ ತಾಕತ್ತು ನನಗಿದೆ. ಇದನ್ನೆಲ್ಲ ಬಿಟ್ಟು ಅವರು ಸದ್ಯದಲ್ಲೇ ಬರಲಿರುವ ಲೋಕಸಭೆ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಂಡು, ರಚನಾತ್ಮಕ ಕೆಲಸ ಮಾಡಲಿ ಎಂದು ಹೇಳಿದರು.
ಬಿ ಎಲ್ ಸಂತೋಷ್ ಬಗ್ಗೆ ನನ್ನ ಟೀಕೆ ರಾಜಕೀಯ ಸ್ವರೂಪದ್ದು. ಅದರಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ಉದ್ದೇಶವಿಲ್ಲ. ನಾನು ನನ್ನ ಜೀವನದಲ್ಲೇ ಯಾವತ್ತೂ ಬ್ರಾಹ್ಮಣರ ಬಗ್ಗೆಯಾಗಲಿ, ಇನ್ನೊಂದು ಸಮುದಾಯದ ಬಗ್ಗೆಯಾಗಲಿ ಅಪ್ಪಿತಪ್ಪಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ. ನಾವು ಪ್ರತಿಯೊಬ್ಬರನ್ನೂ ಗೌರವಿಸುವ ಸಂಸ್ಕಾರವುಳ್ಳವರು ಎಂದು ತಿಳಿಸಿದರು.
ಬಿಎಲ್ ಸಂತೋಷ್ ಸಾಕಿರುವ ಚೇಳು ಈ ಪ್ರತಾಪ್ ಸಿಂಹ
ಪ್ರತಾಪ್ ಅವರು ನನ್ನನ್ನು ಸಿದ್ದರಾಮಯ್ಯನವರ ಚೇಲಾ ಎಂದಿದ್ದಾರೆ. ಬಿಎಲ್ ಸಂತೋಷ್ ಅವರು ಸಾಕಿಕೊಂಡಿರುವ ಒಂದು ಚೇಳು ಈ ವ್ಯಕ್ತಿ ಪ್ರತಾಪ್. ಅವರು ಇಂಥ ಹಲವು ಚೇಳುಗಳನ್ನು ಸಾಕಿಕೊಂಡಿದ್ದಾರೆ. ಹೀಗಾಗಿ ದಿನವೂ ಅವರು ಇಂಥ ಚೇಳುಗಳನ್ನು ಬಿಟ್ಟು, ಮಜಾ ತೆಗೆದುಕೊಳ್ಳುತ್ತಿರುತ್ತಾರೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ನನ್ನದು ಚಿಲ್ಲರೆ ಖಾತೆ ಎಂದು ಹೇಳಿದ್ದಾರೆ. ಕೈಗಾರಿಕಾ ಖಾತೆಯ ಮಹತ್ವದ ಬಗ್ಗೆ ಅವರು ಮೋದಿಯವರ ಬಳಿ ಕೇಳಿ ತಿಳಿದುಕೊಂಡರೆ ಒಳ್ಳೆಯದು. ಖಾತೆ ಯಾವುದಾದರೂ ನಾವು ಮಾಡುವ ಕೆಲಸ ಮುಖ್ಯ. ಇಂಥ ಪ್ರಾಥಮಿಕ ಸಂಗತಿಗಳು ಒಬ್ಬ ಸಂಸದರಿಗೆ ಗೊತ್ತಿಲ್ಲದೆ ಇರುವುದು ವಿಷಾದನೀಯ ಸಂಗತಿ ಎಂದು ಅವರು ಹೇಳಿದ್ದಾರೆ.
English summary
Good relationship in between me and Brahmin community: MB Patil reacts MP Pratap Simha statement.
Story first published: Tuesday, June 20, 2023, 15:09 [IST]