Raichur
oi-Umapathi Ramoji

ರಾಯಚೂರು, ಜೂನ್ 20: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೊಡಿಸುವ ಮೂಲಕ ರಚನೆಯಾಗಿದ್ದ ಅರಕೇರಾ ತಾಲೂಕು ಈಗ ಅಭಿವೃದ್ಧಿ ಅತಂತ್ರವಾಗವುದೇ ಎಂಬ ಆತಂಕ ಮೂಡಿದೆ.
ಆ ಕ್ಷೇತ್ರದ ಶಾಸಕರ ಇಚ್ಛಾಶಕ್ತಿ ಜೊತೆಗೆ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗಲು ಕೆಲವೊಮ್ಮೆ ನಿರೀಕ್ಷಿತ ಪ್ರಗತಿ ಸಾಧಿಸುವುದು ಕಷ್ಟ. ಆದರೆ ಕ್ಷೇತ್ರದಲ್ಲಿ ಬೇರೆ ಪಕ್ಷದ ಶಾಸಕರಿದ್ದು ಮತ್ತೊಂದು ಪಕ್ಷ ಆಡಳಿತದ್ದಲ್ಲಿದ್ದರೆ ಅಭಿವೃದ್ಧಿ ಮಾಡುವುದು ಸುಲಭದ ಮಾತಲ್ಲ. ಇಂಥದ್ದೇ ಪರಿಸ್ಥಿತಿ ಈಗ ದೇವದುರ್ಗ ಕ್ಷೇತ್ರದ ಅರಕೇರಾ ತಾಲೂಕು ಕೇಂದ್ರಕ್ಕೆ ಬಂದೊದಗಿದೆ.

ತಾಲೂಕು ರಚನೆ ಮಾಡುವಲ್ಲಿ ಶ್ರಮಿಸಿರುವುದು ಬಿಜೆಪಿ ಶಾಸಕರಾದರೆ, ಕ್ಷೇತ್ರದಲ್ಲಿ ಈಗ ಗೆದ್ದಿರುವುದು ಜೆಡಿಎಸ್ ಶಾಸಕರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದು ಕಾಂಗ್ರೆಸ್ ಸರ್ಕಾರ. ಬಿಜೆಪಿ ಶಾಸಕರಾಗಿದ್ದ ಕೆ.ಶಿವನಗೌಡ ನಾಯಕ ಜಿದ್ದಿಗೆ ಬಿದ್ದವರಂತೆ ವಿರೋಧದ ನಡುವೆಯೂ ಅರಕೇರಾ ತಾಲೂಕು ಕೇಂದ್ರ ರಚನೆ ಮಾಡಿದರು. ತಾಲೂಕು ರಚನೆಗೆ ಜಾಲಹಳ್ಳಿ ಮತ್ತು ಗಬ್ಬೂರು ಅರ್ಹತೆ ಹೊಂದಿದ್ದರೂ ಅರಕೇರಾವನ್ನು ತಾಲೂಕು ಮಾಡಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಇದೇ ಕಾರಣಕ್ಕೆ ಜಾಲಹಳ್ಳಿ ಮತ್ತು ಗಬ್ಬೂರು ಭಾಗದಲ್ಲಿ ಶಾಸಕರು ಸಾಕಷ್ಟು ವಿರೋಧ ಎದುರಿಸಬೇಕಾಯಿತು. ಅಲ್ಲದೇ ಇದರಿಂದ ಬಿಜೆಪಿ ಚುನಾವಣೆಯಲ್ಲಿ ಹಿನ್ನಡೆ ಕೂಡ ಅನುಭವಿಸಬೇಕಾಯಿತು. ತಾಲೂಕು ರಚನೆ ಮಾಡಿದ ಅವರು ಕಂದಾಯ ಸಚಿವರಿಂದ ಚಾಲನೆ ಕೂಡ ಕೊಡಿಸಿದರು. ಅಭಿವೃದ್ಧಿ ಕಾರ್ಯಗಳಿಗೆ ತೆರೆದುಕೊಳ್ಳುತ್ತಿದ್ದು ಅರಕೇರಾ ನೂತನ ತಾಲೂಕಿಗೆ ಈಗ ಕಂಟಕ ಎದುರಾಗಿದೆ. ಇನ್ನು ಐದು ವರ್ಷಗಳ ಕಾಳ ಹೊಸ ತಾಲೂಕಿಗೆ ಕಾಂಗ್ರೆಸ್ ಸರ್ಕಾರವಾಗಲಿ, ಜೆಡಿಎಸ್ ಶಾಸಕರಾಗಲಿ ಎಷ್ಟರ ಮಟ್ಟಿಗೆ ಒತ್ತು ನೀಡುತ್ತಾರೋ ಎಂಬ ಆತಂಕ ತಾಲೂಕಿನ ಜನರಿಗೆ ಎದುರಾಗಿದೆ.
ಬಿಜೆಪಿ ಕಾಂಗ್ರೆಸ್ ಭಾಯಿ ಭಾಯಿ; ಬಿಜೆಪಿ ಜತೆ ಚುನಾವಣೆ ಒಳಒಪ್ಪಂದ ಎಂದ ಕಾಂಗ್ರೆಸ್ ವಿರುದ್ದ ಜೆಡಿಎಸ್ ಕಿಡಿ
ಹಿಂದಿನ ಬಿಜೆಪಿ ಸರ್ಕಾರ ಅಧಿಕಾರ ಮುಗಿಯುವ ಮುನ್ನ ಘೋಷಣೆ ಮಾಡಿದ್ದ ಮಸ್ಕಿ , ಸಿರವಾರ ತಾಲೂಕುಗಳನ್ನು ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿತ್ತು. ಯಾವ ನಿರೀಕ್ಷಿತ ಸೌಲಭ್ಯಗಳು ಸಿಗಲಿಲ್ಲ. ಸುಸಜ್ಜಿತ ಆಡಳಿತ ಭವನಗಳಾಗಲಿ, ಅಗತ್ಯ ಅಧಿಕಾರಿ, ಸಿಬ್ಬಂದಿ ನೇಮಕವಾಗಲಿ ನಡೆಯಲಿಲ್ಲ. ಅಚ್ಚರಿ ಎಂದರೆ ಆದಾದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ತಾನೇ ರಚಿಸಿದ ತಾಲೂಕುಗಳ ಉದ್ಧಾರಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಿಲ್ಲ.
ಹೆಸರಿಗೆ ಮಾತ್ರ ತಾಲೂಕುಗಳೆಂಬ ಗರಿಮೆ ಬಿಟ್ಟರೆ ಹೆಚ್ಚಿನ ಪ್ರಗತಿ ಕಂಡು ಬಂದಿಲ್ಲ. ಇಂದಿಗೂ ಈ ತಾಲೂಕುಗಳು ಕುಂಟುತ್ತಲೇ ಸಾಗುತ್ತಿವೆ. ಇಂತಹ ಹೊತ್ತಲ್ಲಿ ಅಚ್ಚರಿಯ ನಡೆ ತೋರಿದ್ದ ಹಿಂದಿನ ಬಿಜೆಪಿ ಸರ್ಕಾರ ಅರಕೇರಾ ತಾಲೂಕು ರಚನೆ ಮಾಡಿತ್ತು. ಶಾಸಕ ಕೆ.ಶಿವನಗೌಡ ನಾಯಕ ಪಟ್ಟು ಬಿಡದೆ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ಕಾರಣಕ್ಕೆ ಇದು ಬೇಗ ಪ್ರಗತಿ ಸಾಧಿಸಬಹುದು ಎನ್ನಲಾಗಿತ್ತು. ಆದರೆ ಅವರೇ ಸೋಲುಂಡಿದ್ದು, ಈಗಿನ ಪರಿಸ್ಥಿತಿ ಗಮನಿಸಿದರೆ ಅರಕೇರಾ ಅಷ್ಟೊಂದು ಸುಲಭಕ್ಕೆ ಅಭಿವೃದ್ಧಿ ಹಳಿಯಲ್ಲಿ ಸಾಗುವುದು ಕಷ್ಟ.
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಈ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲುಚಿಡಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿನಾಯಕ ಮೂಲತಃ ಅರಕೇರಾದವರಾಗಿದ್ದು ಹಿಡಿತ ಸಾಧಿಸಿದ್ದರು. ಅವರೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದು ಪಕ್ಷಕ್ಕೆ ಹಿನ್ನೆಡೆಯಾಗಿದೆ. ಪರಾಜಿತ ಅಭ್ಯರ್ಥಿ ಕೂಡ ಚುನಾವಣೆಯಲ್ಲಿ ಉತ್ತಮ ಮತ ಪಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಈಗೇನಿದ್ದರೂ ಶಾಸಕರ ಇಚ್ಛಾಶಕ್ತಿ ಮೇಲೆ ಅರಕೇರಾ ಅಭಿವೃದ್ಧಿ ನಿರ್ಧಾರಗೊಳ್ಳಲಿದೆ.
ಈ ಬಗ್ಗೆ ಕ್ಷೇತ್ರದ ಶಾಸಕಿ ಜಿ.ಕರೆಮ್ಮ ಮಾತನಾಡಿದ್ದು, ‘ನಮ್ಮ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದವು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ನನ್ನ ಕ್ಷೇತ್ರದ ಪ್ರಗತಿಗೆ ಪಕ್ಷಭೇದ ಮರೆತು ಶ್ರಮಿಸುವೆ. ಅರಕೇರಾ ತಾಲೂಕು ಅಭಿವೃದ್ಧಿಗೂ ನಾನು ಒತ್ತು ನೀಡುತ್ತೇನೆ. ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಅಭಿವೃದ್ಧಿಗೆ ಸಹಕರಿಸುವಂತೆ ಕೋರಲಾಗುವುದು’ ಎಂದರು.
English summary
Arakera taluk, which was created by approval in the cabinet meeting during the last BJP government, now there is concern that the development will be hampered.
Story first published: Tuesday, June 20, 2023, 12:16 [IST]