Agriculture
oi-Naveen Kumar N

ತಿಪಟೂರು, ಜೂನ್ 27: ಕೊಬ್ಬರಿ ಬೆಲೆಯಲ್ಲಿ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷದಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ ದರ 18,000 ರೂಪಾಯಿ ಆಸುಪಾಸಿನಲ್ಲಿದ್ದರೆ, ಕಳೆದ 7 ತಿಂಗಳಿಂದ ಕಡಿಮೆಯಾಗುತ್ತಲೇ ಬರುತ್ತಿದೆ, ಸದ್ಯ ಒಂದು ಕ್ವಿಂಟಾಲ್ ಕೊಬ್ಬರಿಗೆ ದರ 8000 ರೂಪಾಯಿ ಆಸುಪಾಸಿನಲ್ಲಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಕಡಿಮೆಯಾಗುವ ಆತಂಕದಲ್ಲಿದ್ದಾರೆ ರೈತರು.
2022ರ ಜನವರಿ ತಿಂಗಳಿನಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ ದರ 18206 ರೂಪಾಯಿಗಳಿದ್ದರೆ, ಮಾರ್ಚ್ ವೇಳೆಗೆ 16255 ರೂಪಾಯಿಗಳಿಗೆ ಕುಸಿತ ಕಂಡಿತ್ತು. ನಂತರ 17 ರೂಪಾಯಿ ಆಸುಪಾಸಿನಲ್ಲಿದ್ದ ದರ 2022ರ ಮೇ ತಿಂಗಳಿನಲ್ಲಿ ದಿಢೀರ್ ಎಂದು 15 ಸಾವಿರ ರೂಪಾಯಿಗಳಿಗೆ ಕುಸಿತ ಕಂಡಿತು. ಅಂದಿನಿಂದ ಇಂದಿನವರೆಗೂ ದರ ಸತತವಾಗಿ ಕುಸಿಯುತ್ತಲೇ ಬಂದಿದೆ. 2023ರ ಜನವರಿ ತಿಂಗಳಲ್ಲಿ 10917 ರೂಪಾಯಿ ಇದ್ದ ಜೂನ್ 24ರಂದು 8028 ರೂಪಾಯಿಗೆ ಮಾರಾಟವಾಗಿದೆ.

ತುಮಕೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬ್ಬರಿಗೆ ತಿಪಟೂರು ಪ್ರಮುಖ ಮಾರುಕಟ್ಟೆಯಾಗಿದೆ. ಏಷ್ಯಾದ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಎನ್ನುವ ಖ್ಯಾತಿ ಕೂಡ ತಿಪಟೂರು ಕೊಬ್ಬರಿ ಮಾರುಕಟ್ಟೆಗಿದ್ದು, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕುಸಿತ ಸದ್ಯ ರೈತರಲ್ಲಿ ಆತಂಕ ತಂದಿದೆ.
ಕೊಬ್ಬರಿ ಬೇಡಿಕೆ ಕಡಿಮೆಯಾಗಲು ಕಾರಣವೇನು?
ತಿಪಟೂರು ಕೊಬ್ಬರಿಗೆ ಉತ್ತರ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ. ಇಲ್ಲಿನ ಕೊಬ್ಬರಿ ಉತ್ತಮ ಗುಣಮಟ್ಟದ್ದಾಗಿದ್ದು, ರುಚಿ ಹೊಂದಿರುವ ಕಾರಣ ಉತ್ತರ ಭಾರತದಲ್ಲಿ ಸಿಹಿ ತಯಾರಿಕೆ ಮತ್ತು ಸೌಂದರ್ಯವರ್ಧಕಗಳ ಬಳಕೆಗೆ ಹೆಚ್ಚಿನದಾಗಿ ಬಳಸುತ್ತಾರೆ. ಚಳಿಗಾಲದ ಸಂದರ್ಭಗಳಲ್ಲಿ ಉತ್ತರ ಭಾರತದಲ್ಲಿ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿರುತ್ತದೆ, ಆದರೆ ಈ ಬಾರಿ ಉತ್ತರ ಭಾರತದಲ್ಲಿ ಉಷ್ಣಾಂಶ ಹೆಚ್ಚಿದ್ದ ಕಾರಣ ಕೊಬ್ಬರಿಗೆ ಬೇಡಿಕೆ ಕಡಿಮೆಯಾಗಿದ್ದು, ಬೆಲೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ತೆಂಗು ಬೆಳೆಗಾರರ ಸಮಸ್ಯೆ ಕೇಳುವುದ್ಯಾರು?
ದರ ಕುಸಿತದಿಂದ ತೆಂಗು ಬೆಳೆಗಾರರು ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ. ಕೊಬ್ಬರಿಗೆ ದರ ಕಡಿಮೆಯಾದರೆ ಸಹಜವಾಗಿ ತೆಂಗಿನಕಾಯಿ ಬೆಲೆ ಕೂಡ ಕಡಿಮೆಯಾಗಲಿದೆ. ಇದರ ಜೊತೆಗೆ ತೆಂಗು ಬೆಳೆಗೆ ಅನೇಕ ರೋಗಗಳು ಕೂಡ ಕಾಡುತ್ತಿವೆ. ಕಪ್ಪು ತಲೆಹುಳು ರೋಗ, ರಸ ಸೋರಿಕೆ, ನುಸಿಪೀಡೆ, ಕಾಂಡಕೊರಕ ರೋಗಗಳಿಂದ ತೆಂಗಿನ ತೋಟಗಳೇ ಕಡಿಮೆಯಾಗುತ್ತಿವೆ. ಅತಿಯಾದ ಉಷ್ಣಾಂಶ, ನೀರಿನ ಅಭಾವದ ನಡುವೆಯೂ ತೆಂಗು ಬೆಳೆಯುವ ಬೆಳೆಗಾರರಿಗೆ ದರ ಕುಸಿತ ಕಂಗಾಲಾಗುವಂತೆ ಮಾಡಿದೆ.
18 ಸಾವಿರ ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಲು ಒತ್ತಾಯ
ಒಂದು ಕ್ವಿಂಟಾಲ್ ಕೊಬ್ಬರಿ ಉತ್ಪಾದನೆಗೆ ಕನಿಷ್ಠ 15 ರಿಂದ 15 ಸಾವಿರ ರೂಪಾಯಿ ಖರ್ಚು ಬರುತ್ತದೆ. ಆದ್ದರಿಂದ ಸದ್ಯ ಇರುವ ಕೊಬ್ಬರಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ 11750 ರೂಪಾಯಿಗಳಿಂದ 18 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಎನ್ನುವ ಬೇಡಿಕೆ ರೈತರದ್ದಾಗಿದೆ. ರೈತರ ಆದಾಯ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತೇವೆ, ಆದಾಯ ಡಬಲ್ ಮಾಡುತ್ತೇವೆ ಎನ್ನುವುದು ಕೇವಲ ಭಾಷಣದಲ್ಲಿ ಇದ್ದರೆ ಸಾಲದು ಅದಕ್ಕೆ ತಕ್ಕಂತೆ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
English summary
The price of copra in the market is expected to continue falling, with one quintal of copra currently priced at around Rs. 8000 in the Tipur Market. Coconut farmers are fearful of incurring losses and are seeking help from the government.
Story first published: Tuesday, June 27, 2023, 10:39 [IST]