Bengaluru
oi-Naveen Kumar N

ಬೆಂಗಳೂರು, ಜೂನ್ 20: ಅನ್ನದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ, ಹಸಿವು ಮುಕ್ತ ರಾಜ್ಯ ಮಾಡಲು ನಾವು ತೀರ್ಮಾನಿಸಿದ್ದೇವೆ, ಆದರೆ ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬದ ಪ್ರತಿವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಬಳಿ ಅಕ್ಕಿ ದಾಸ್ತಾನು ಇದ್ದರೂ ಕೊಡುತ್ತಿಲ್ಲ, ಕೇಂದ್ರ ಅಕ್ಕಿ ಕೊಡದೇ ಇದ್ದರೂ ನಾವು ಬೇರೆ ರಾಜ್ಯಗಳಿಂದ ಖರೀದಿ ಮಾಡಿ ಹಂಚಿಕೆ ಮಾಡುತ್ತೇವೆ ಎಂದು ಹೇಳಿದರು.

ಈಗಾಗಲೇ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ನಮ್ಮ ಸರ್ಕಾರ ಹಾಗೂ ಮಂತ್ರಿಗಳು ಬೇರೆ ರಾಜ್ಯಗಳ ಜೊತೆ ಸಂಪರ್ಕ ಮಾಡುತ್ತಿದ್ದಾರೆ. 5 ಕೆ.ಜಿ. ಯಷ್ಟು ಪೂರೈಸಲು ಅಕ್ಕಿ ದಾಸ್ತಾನು ಇದೆ, ಆದರೆ ಉಳಿದ 5 ಕೆ.ಜಿ. ಅಕ್ಕಿಯನ್ನು ಹೊಂದಿಸಲು ಪ್ರಯತ್ನ ಮಾಡುತ್ತಿದ್ದೇವೆ. ಕೆಲವು ಭಾಗಗಳಲ್ಲಿ ಅಕ್ಕಿ ಬದಲಾಗಿ ರಾಗಿ, ಜೋಳ ಕೊಡಿ ಎಂದು ಕೇಳುತ್ತಿದ್ದಾರೆ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಕ್ಕಿಯಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಪಾಠ ಕಲಿಸಿ
ಬಡವರ ಅನ್ನದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ, ಜನ ಇದನ್ನೆಲ್ಲ ನೋಡಿದ್ದಾರೆ ರಾಜ್ಯದ ಜನತೆ ಮುಂಬರು ಲೋಕಸಭಾ, ಜಿಲ್ಲಾ ಪಂಚಾಯಿತಿ ಮತ್ತು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಅಕ್ಕಿ ಪೂರೈಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ
ನಾವು ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಳುತ್ತಿಲ್ಲ, ಆದರೂ ಸರ್ಕಾರ ತಮ್ಮ ನೀತಿ ಬದಲಾಗಿದೆ ಎಂದು ಕಾರಣ ನೀಡುತ್ತಿದ್ದಾರೆ. ನಮ್ಮ ಮೇಲೆ ಜನರನ್ನು ಎತ್ತಿಕಟ್ಟಲು ಬಿಜೆಪಿ ಈ ರಾಜಕೀಯ ಮಾಡುತ್ತಿದೆ, ಆದರೆ ಜನ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೆ ಅನ್ಯಾಯ ಎಸಗುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಇಂದು ಫ್ರೀಡಂ ಪಾರ್ಕ್‌ನಲ್ಲಿ ಅನ್ನ ಮಾಡುವ ಮೂಲಕ ನಮ್ಮ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಡವರ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. pic.twitter.com/nSBpCjjH9Z— DK Shivakumar (@DKShivakumar) June 20, 2023
ಯಡಿಯೂರಪ್ಪ ಹೇಳಿಕೆಗೆ ಡಿಕೆಶಿ ತಿರುಗೇಟು
ಸರ್ಕಾರ ಘೋಷಣೆ ಮಾಡಿದಂತೆ 10 ಕೆ.ಜಿ. ಅಕ್ಕಿ ಕೊಡಬೇಕು ಒಂದು ಕಾಳು ಕೊಟ್ಟರು ಸುಮ್ಮನಿರಲ್ಲ, ಹೋರಾಟ ಮಾಡುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ನೀಡಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಯಡಿಯೂರಪ್ಪ, ಬೊಮ್ಮಾಯಿ ಅವರೇ, ನಿಮ್ಮ ಪಕ್ಷ ಹೇಳಿದಂತೆ, ನೀವು ಇನ್ನೂ ಯಾಕೆ ಎಲ್ಲರ ಖಾತೆಗೆ 15 ಲಕ್ಷ ಹಾಕಿಸಿಲ್ಲ, ರೈತರ ಆದಾಯ ಡಬಲ್ ಯಾಕೆ ಮಾಡಿಲ್ಲ? ಯುವಕರಿಗೆ ಯಾಕೆ ಉದ್ಯೋಗ ನೀಡಿಲ್ಲ? ಈ ಬಗ್ಗೆ ನೀವು ಮೊದಲು ಉತ್ತರ ನೀಡಿ, ಹೋರಾಟ ಮಾಡಿ. ಅದನ್ನು ಬಿಟ್ಟು ದಿನಬೆಳಗಾದರೆ ಯಡಿಯೂರಪ್ಪ, ಕಟೀಲ್, ಅಶೋಕ್ ಎಲ್ಲರೂ ಒಂದೊಂದು ವ್ಯಂಗದ ಮಾತು ಆಡುತ್ತಿದ್ದಾರೆ ಎಂದು ಹೇಳಿದರು.
ವಿರೋಧ ಪಕ್ಷವಾಗಿ ರಾಜಕೀಯವಾಗಿ ಟೀಕೆ ಮಾಡಿ ನಮ್ಮನ್ನು ತಿದ್ದಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. “ನೀವು ಕೊಟ್ಟ ಮಾತಿನಂತೆ ಒಳ್ಳೆದಿನ ಬಂದಿಲ್ಲ, ಹೀಗಾಗಿ ನಾವು ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ” ಎಂದು ನಿಮ್ಮ ಅಧ್ಯಕ್ಷರಾದ ನಡ್ಡಾ ಹಾಗೂ ಪ್ರಧಾನಿ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಪ್ರತಿಭಟನೆ ಮಾಡಲಿ ಎಂದರು.
ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ
ಬಡವರ ಹೊಟ್ಟೆ ತುಂಬುವ ವಿಚಾರದಲ್ಲಿ ಕೇಂದ್ರ ಸರ್ಕಾರದ ರಾಜಕಾರಣದ ವಿರುದ್ಧ ಇಂದು ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ. ಸೋನಿಯಾ ಗಾಂಧಿ ಅವರು ಯುಪಿಎ ಸರ್ಕಾರದ ಅಧ್ಯಕ್ಷರಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ನಮಗೆ ಆಹಾರವನ್ನು ಸಂವಿಧಾನಬದ್ಧ ಹಕ್ಕಾಗಿ ನೀಡಿದರು.
ಕೇಂದ್ರ ಸರ್ಕಾರ ಅಂದು ಪ್ರತಿ ಕೆ.ಜಿ ಅಕ್ಕಿಗೆ ಸುಮಾರು 28 ರೂ. ಉಳಿದ 3-4 ರೂ. ರಾಜ್ಯ ಸರ್ಕಾರ ಭರ್ತಿ ಮಾಡಿ ಬಡವರಿಗೆ ಅಕ್ಕಿ ಹಂಚಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಅನ್ನಭಾಗ್ಯ ಯೋಜನೆ ಜಾರಿ ಮಾಡಿ ಬಡ ಕುಟುಂಬದ ಪ್ರತಿ ವ್ಯಕ್ತಿಗೆ 5 ಕೆ ಜಿ ಅಕ್ಕಿ ನೀಡಿತ್ತು. ನಂತರ ಸಿದ್ದರಾಮಯ್ಯ ಅದನ್ನು 7ಕೆ.ಜಿಗೆ ಏರಿಸಿದ್ದರು. ನಾವು ನಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ 10 ಕೆ ಜಿ ಅಕ್ಕಿ ನೀಡುವುದಾಗಿ ಹೇಳಿದ್ದೇವೆ ಅದರಂತೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದರು.
English summary
Deputy Chief Minister of Karnataka, DK Shivakumar, Promises to Create a Hunger-Free State. He made this commitment during a Congress protest following the denial by the Central Government to supply extra rice to the state.