Karnataka
oi-Shankrappa Parangi

ಹಾವೇರಿ, ಜೂನ್ 18: ಕಾಂಗ್ರೆಸ್ ಸರ್ಕಾರ ಉಚಿತ ಕೊಡುಗೆಗಳ ಭರದಲ್ಲಿ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಕಡಿತ ಮಾಡಬಾರದು. ಇದಷ್ಟೇ ಅಲ್ಲದೇ ರಾಜ್ಯದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಅನುದಾನ ಕಡಿತವಾಗುವ ಸಾಧ್ಯತೆ ಇದೆ. ಹೀಗಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎರಡು ಶಾಲಾ ಕೊಠಡಿಗಳ ಉದ್ಘಾಟನೆಗೆ ಬಂದಿದ್ದಾರೆ ಎಂದು ನಿಮಗೆ ಆಶ್ಚರ್ಯವಾಗಬಹುದು. ನಾನು ರಾಜ್ಯದ ಭವಿಷ್ಯ ಬರೆಯುವ ದೇಗುಲಗಳ ಉದ್ಘಾಟನೆ ಮಾಡಿದ್ದೇನೆ ಎಂದು ತಮ್ಮ ನಡೆ ಸಮರ್ಥಿಸಿಕೊಂಡರು.

ಒಂದು ಗ್ರಾಮಕ್ಕೆ ಕುಡಿಯುವ ನೀರು ಆರೋಗ್ಯದ ಜೊತೆಗೆ ಶಾಲಾ ಕೊಠಡಿಗಳು. ಅದಕ್ಕಾಗಿ ನಾನು ಶಾಲಾ ಕಟ್ಟಡಕ್ಕೆ ಆದ್ಯತೆ ನೀಡಿದ್ದೇನೆ. ವಿವೇಕ ಯೋಜನೆ ಅಡಿಯಲ್ಲಿ ಸುಮಾರು 9235, ಶಾಲಾ ಕೊಠಡಿಗಳನ್ನು ನಿರ್ಮಿಸಲು ಆದೇಶ ಮಾಡಿದ್ದೇವೆ.
ಸ್ವಂತ ಟ್ರಸ್ಟ್‌ನಿಂದ ಶಿಕ್ಷಕರನ್ನು ನೀಡಲಾಗುವುದು
ರೈತನ ಭೂಮಿ ಎಷ್ಟಿದೆ ಅಷ್ಟೇ ಇರುತ್ತದೆ. ಆದರೆ, ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಶಿಕ್ಷಣ ಅತ್ಯಂತ ಮುಖ್ಯ ಆದ್ದರಿಂದ ನಾನು ಶಿಕ್ಷಣಕ್ಕೆ ಶೇಕಡಾ 13ರಷ್ಟು ಅನುದಾನ ನೀಡಿದ್ದೇನೆ. ಆರೋಗ್ಯ ಕ್ಷೇತ್ರಕ್ಕೆ 12% ಅನುದಾನ ನೀಡಿದ್ದೇನೆ.
ನಮ್ಮ ಅವಧಿಯಲ್ಲಿ 15000 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಉಂಟಾದರೆ ನಮ್ಮ ಸ್ವಂತ ಟ್ರಸ್ಟ್ ನಿಂದ ಶಿಕ್ಷಕರನ್ನು ನೀಡಲಾಗುವುದು ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ಧೇವೆ. ಪದವಿವರೆಗೆ ಉಚಿತ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಬಸ್ ನಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಆಗಿಲ್ಲ ಎಲ್ಲ ವಿದ್ಯಾರ್ಥಿನಿಯರಿಗೂ ಅನುಕೂಲವಾಗಿದೆ ಎಂದು ಹೇಳಿದರು.
ವಿದ್ಯುತ್ ನೀಡದಿದ್ದರೆ ನೀರಿಗೆ ಹಾಹಾಕಾರ
ರಾಜ್ಯ ಸರ್ಕಾರ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡದಿದ್ದರೆ ನೀರಿಗೆ ಹಾಹಾಕಾರ ಉಂಟಾಗಲಿದೆ. ವಿದ್ಯುತ್ ದರ ಹೆಚ್ಚಾಗಲು ಜನರು ಬಿಲ್ ಕಟ್ಟಲು ನಿರಾಕರಿಸುತ್ತಿದ್ದಾರೆ. ದರ ಕಟ್ಟಲಿಲ್ಲ ಎಂದರೆ ಕರೆಂಟ್ ಸರಬರಾಜು ಆಗುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಮಳೆ ಬಂದಿಲ್ಲ, ಮಳೆ ಕೊರತೆ ಇದೆ. ಬರ ಆಗಿದೆ ರೈತರಿಗೆ ಹಾಗೂ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜನರಿಗೆ ಕುಡಿಯುವ ನೀರು ಸರಬರಾಜು ಆಗಲು ವಿದ್ಯುತ್ ಅನ್ನು ಸಮರ್ಪಕವಾಗಿ ಪೂರೈಸಬೇಕು. ಬೋರ್ ವೆಲ್ ಗಳಿಂದ ಹಾಗೂ ಅನೇಕ ಕೆಲಸಗಳಿಗೆ ವಿದ್ಯುತ್ ಬೇಕು. ಸರ್ಕಾರ ವಿದ್ಯುತ್ ನೀಡದಿದ್ದರೆ ನೀರಿಗೆ ಆಹಾರ ಆಗುತ್ತದೆ. ಹೈಡ್ರೋ ಎಲೆಕ್ಟಿಕ್ ಪವರ್ ಕೊರತೆ ಇದೆ. ಹೀಗಾಗಿ ವಿದ್ಯುತ್ ಇಲಾಖೆ ಎಲ್ಲಾ ನಿಗಮಗಳಿಗೆ ಹಣ ಬಿಡುಗಡೆ ಮಾಡಬೇಕು. ಇವರು ಸರಿಯಾದ ಕ್ರಮವನ್ನು ತೆಗೆದಕೊಳ್ಳದಿದ್ದರೆ, ವಿದ್ಯುತ್ ಶಕ್ತಿಯ ಕ್ಷಾಮ ಆಗುತ್ತದೆ ಎಂದು ಅವರು ವಿವರಿಸಿದರು.
ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಕಾಂಗ್ರೆಸ್
ಉಚಿತ ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರದತ್ತ ಬೆಟ್ಟು ಮಾಡದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಕೇಂದ್ರವೇ ಅಕ್ಕಿ ವಿತರಿಸದೇ ಬಡ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಇನ್ನೂ ಇತ್ತೀಚೆಗೆ ಕಾಂಗ್ರೆಸ್ ಛತ್ತೀಸಗಢ ಸೇರಿದಂತೆ ಬೇರೆ ರಾಜ್ಯಗಳಿಂದ ಅಕ್ಕಿ ತರುವ ಬಗ್ಗೆ ಮಾತುಕತಡೆ ನಡೆಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಡವರಿಗೆ ಅನುಕೂಲವಾದರೆ ಸಾಕು ಎಂದು ಬೊಮ್ಮಾಯಿ ಹೇಳಿದರು.
ಕರ್ನಾಟಕದ ರಾಜ್ಯದ ಕೃಷಿಕರು ಅಕ್ಕಿ ಕೊಡುವುದಕ್ಕೆ ಮುಂದೆ ಬಂದರೆ ಸರ್ಕಾರ ಅದನ್ನು ಸೂಕ್ತ ಬೆಲೆಗೆ ಖರೀದಿಸಬೇಕು. ಅದನ್ನು ಸಹ ಕೇಂದ್ರ ಸರ್ಕಾರ, ಬಿಜೆಪಿಯವರೇ ಕೊಡಿಸಬೇಕು ಎಂದರೆ ಹೇಗೆ, ಇದು ಸರಿಯಲ್ಲ ಎಂದು ಅವರು ಲೇವಡಿ ಮಾಡಿದರು.
English summary
Congress should take action so that there is no shortage of funds for the development projects of the state, Says Basavaraj bommai.