ಕಾಂಗ್ರೆಸ್ಸಿಗರು ಪಕ್ಷ ಸೇರಿದ ಬಳಿಕ ಬಿಜೆಪಿಯಲ್ಲಿ ಅಶಿಸ್ತು ಎಂದ ಈಶ್ವರಪ್ಪ: ಪಕ್ಷವನ್ನು ಮತ್ತಷ್ಟು ಅಪಾಯಕ್ಕೆ ದೂಡಿದ ಹಿರಿಯ ನಾಯಕ | Karnataka BJP: indiscipline in Party after Congressmen joined the party says Eshwarappa

Karnataka

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 26: ಕರ್ನಾಟಕದಲ್ಲಿನ ಹೀನಾಯ ಸೋಲಿನ ಬಳಿಕ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಪಕ್ಷದ ಕೆಲ ಮುಖಂಡರು ತಮ್ಮದೇ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಲವರು ಹೊಂದಾಣಿಕೆ ರಾಜಕಾರಣದ ಗೂಬೆ ಕೂರಿಸಿದರೆ, ಇನ್ನು ಕೆಲವರು ಪಕ್ಷ ವಿರೋಧ ಚಟುವಟಕೆ ಬಗ್ಗೆ ಆರೋಪಿಸಿದ್ದಾರೆ. ಇಂತಹ ಸಂದರ್ಭದಲ್ಲೇ, ಕೆಎಸ್‌ ಈಶ್ವರಪ್ಪ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಈ ಹಿಂದೆ ಶಿಸ್ತಿನ ಪಕ್ಷವಾಗಿತ್ತು. ಆದರೆ, ಈಗ ಪಕ್ಷದಲ್ಲಿ ಅಶಿಸ್ತಿನ ವಾತಾವರಣವಿದೆ. ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿಗೆ ಬಂದಿರುವ ವಲಸಿಗರಿಂದ ಅಶಿಸ್ತು ಮೂಡಿದೆ. ಪಕ್ಷದಲ್ಲಿ ಅಶಿಸ್ತಿನ ಚಟುವಟಿಕೆಯಲ್ಲಿ ತೊಡಗಿದವರ ಬಾಲವನ್ನು ಕಟ್‌ ಮಾಡುತ್ತೇವೆ ಎಂದು ಹೇಳಿದ್ದಾರೆ.

Karnataka BJP

ಕಳೆದ ತಿಂಗಳು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಪರೇಷನ್‌ ಕಮಲ ಬಿಜೆಪಿ ಗೆಲುವಿಗೆ ಮುಳುವಾಯಿತು. ಕಾಂಗ್ರೆಸ್‌ ಶಾಸಕರನ್ನು ಪಕ್ಷಕ್ಕೆ ಕರೆದುಕೊಂಡು ಬಂದೆವು. ಅದು ನಮ್ಮ ಸೋಲಿಗೆ ಕಾರಣವಾಗಿದೆ. ನಾವು ಮಾಡಿದ್ದನ್ನು ನಾವೇ ಅನುಭವಿಸಬೇಕಾಗಿದೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಕರ್ನಾಟಕ ಬಿಜೆಪಿಯಲ್ಲೀಗ ಶಿಸ್ತು ಕಳೆದುಹೋಗಿದೆ. ಕಾಂಗ್ರೆಸ್‌ನಲ್ಲಿ ಶಿಸ್ತು ಇಲ್ಲ. ಅಲ್ಲಿನ ನಾಯಕರನ್ನು ಆಪರೇಷನ್‌ ಕಮಲದ ಮೂಲಕ ಪಕ್ಷಕ್ಕೆ ಕರೆತಂದೆವು. ಕಾಂಗ್ರೆಸ್‌ನ ಗಾಳಿ ಪಕ್ಷಕ್ಕೆ ಸೋಕಿದೆ. ಪಕ್ಷದ ಸೋಲಿಗೆ ಇದು ಕಾರಣವೆಂದು ಅವರು ಹೇಳಿದ್ದಾರೆ.

Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪಟ್ಟು; ನಾನು ಸನ್ಯಾಸಿ ಅಲ್ಲ, ಅಧ್ಯಕ್ಷ ಹುದ್ದೆ ಆಕಾಂಕ್ಷಿ!Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಪಟ್ಟು; ನಾನು ಸನ್ಯಾಸಿ ಅಲ್ಲ, ಅಧ್ಯಕ್ಷ ಹುದ್ದೆ ಆಕಾಂಕ್ಷಿ!

ಪಕ್ಷದಲ್ಲಿನ ಹೊಂದಾಣಿಕೆ ರಾಜಕಾರಣದ ಬಗ್ಗೆ ಬಹಿರಂಗವಾಗಿ ಚರ್ಚೆ ಆಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಇದೆಲ್ಲವೂ ನಾಲ್ಕು ಗೋಡೆಗಳ ನಡುವೆ ಚರ್ಚೆಯಾಗಬೇಕು. ನಾಲ್ಕು ಗೋಡೆಗಳ ನಡುವೆ ಕೂತು ಮಾತನಾಡಬೇಕು. ಬಹಿರಂಗ ಹೇಳಿಕೆ ನೀಡುತ್ತಿರುವ ನಾಯಕರನ್ನು ಕರೆದು ಮಾತನಾಡುತ್ತೇವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

Karnataka BJP

ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿರುವುದು ನಿಜ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಜೆಪಿ ನಾಯಕರು ಪ್ರವಾಸ ಮಾಡಲಿದ್ದಾರೆ. ಈ ಮೂಲಕ ಕಾರ್ಯಕರ್ತರಲ್ಲಿ ಹುರುಪು ತುಂಬುವ ಕೆಲಸ ಮಾಡಲಿದ್ದಾರೆ. ನಮ್ಮ ಹೈಕಮಾಂಡ್‌ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ.

ಈಶ್ವರಪ್ಪ ಹೇಳಿಕೆ ಬೆನ್ನಲ್ಲೇ ಹೊತ್ತಿಕೊಂಡ ಬೆಂಕಿ

ಈಶ್ವರಪ್ಪ ಈ ರೀತಿ ಹೇಳಿರುವುದು ಬಿಜೆಪಿ ಪಕ್ಷದ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಎಲ್ಲವನ್ನೂ ಬಂದವರ ತಲೆಗೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್‌ಸಿ ಎನ್‌ ರವಿಕುಮಾರ್‌, ಬಿಜೆಪಿಯಲ್ಲಿ ಹೊರಗಿನವರು-ಒಳಗಿನವರು ಎಂಬುದಿಲ್ಲ. ಕಾಂಗ್ರೆಸ್‌ನಿಂದ ಬಂದವರಲ್ಲಿ ಬಹಳ ಜನ ಗೆಲುವು ಸಾಧಿಸಿದ್ದಾರೆ. ಎಲ್ಲರೂ ಸೇರಿಯೇ ಚುನಾವಣೆ ಎದುರಿಸಿದ್ದೇವೆ ಎಂದು ತಿಳಿಸಿದ್ದಾರೆ.

Karnataka BJP

ವಲಸಿಗರ ಆಕ್ರೋಶಕ್ಕೆ ಕಾರಣವಾಗಲಿದೆ ಈಶ್ವರಪ್ಪ ಹೇಳಿಕೆ

2019 ರಲ್ಲಿ ಬಿಜೆಪಿ ಕೈಗೊಂಡ ಆಪರೇಷನ್‌ ಕಮಲದಲ್ಲಿ ಕಾಂಗ್ರೆಸ್‌ನ 15 ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರು. ಈಶ್ವರಪ್ಪ ಅವರು ಈ ರೀತಿಯ ಆರೋಪ ಮಾಡಿದ ನಂತರ ವಲಸಿಗರಲ್ಲಿ ಸಹಜವಾಗಿಯೇ ಆಕ್ರೋಶ ವ್ಯಕ್ತವಾಗುವ ನಿರೀಕ್ಷೆಯಿದೆ. ಈಗಾಗಲೇ ಅಸಮಾಧಾನದ ಬೆಂಕಿಯಲ್ಲಿ ಬೇಯಿತ್ತಿರುವ ಬಿಜೆಪಿಯನ್ನು ಮತ್ತಷ್ಟು ಅಪಾಯಕ್ಕೆ ದೂಡಿದರೇ ಈಶ್ವರಪ್ಪ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿವೆ.

ಕಾಂಗ್ರೆಸ್‌ ಟ್ವೀಟ್‌

ಬಾಂಬೆ ಟೀಮ್ ಈಗ ಬಿಜೆಪಿಯಲ್ಲಿ ಅನಾಥರ ಟೀಮ್ ಆಗಿದೆ. ‘ವಲಸಿಗ vs ಮೂಲ’ ಎಂಬ ಒಳಬೇಗುದಿಗೆ ಈಶ್ವರಪ್ಪ ತುಪ್ಪ ಸುರಿದಿದ್ದಾರೆ. ವಲಸೆ ಬಂದವರಿಂದಲೇ ಶಿಸ್ತು ಮಾಯವಾಗಿದೆ ಎಂಬ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೀರಾ ಅಥವಾ ಈಶ್ವರಪ್ಪರನ್ನೇ ಬಾಯಿ ಮುಚ್ಚಿಸುತ್ತೀರಾ ಬಿಜೆಪಿ? ನಾಯಕನಿಲ್ಲದ ಬಿಜೆಪಿ, ನಾವಿಕನಿಲ್ಲದ ಹಡಗಿನಂತಾಗಿ ಮುಳುಗಿದೆ, ನೆಲ ಕಚ್ಚುವುದೊಂದೇ ಬಾಕಿ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

English summary

Karnataka BJP: After the humiliating defeat in Karnataka, a fire of resentment has been ignited in the BJP. Some party leaders are indirectly attacking their own party leaders

Story first published: Monday, June 26, 2023, 16:31 [IST]

Source link