India
oi-Mamatha M

ಭುವನೇಶ್ವರ, ಜೂನ್. 20: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ಎಂಬ ಸಣ್ಣ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಇದೇ ಸ್ಥಳದಲ್ಲಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತ ಕಾಣದ ಅತ್ಯಂತ ಭೀಕರ ರೈಲು ಅಪಘಾತ ಸಂಭವಿಸಿದೆ. ಅದಿನ್ನು ಜನರ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತಾಡಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, “ಬಹನಾಗಾ ಬಜಾರ್‌ನಲ್ಲಿ ರೈಲು ಅಪಘಾತ ಘಟನೆಯ ಸಂದರ್ಭದಲ್ಲಿ ಬಹನಾಗಾ ಜನರು ಮುಂದೆ ಬಂದು ಸಹಾಯ ಮಾಡಿದ ರೀತಿ, ಅವರು ರೈಲ್ವೆ ಮತ್ತು ಆಡಳಿತದೊಂದಿಗೆ ಕೆಲಸ ಮಾಡಿದ ರೀತಿ ಗಮನಾರ್ಹವಾಗಿದೆ. ಹೀಗಾಗಿ ಬಹನಗಾ ಗ್ರಾಮದ ಜನತೆಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ನಾನು ಇಲ್ಲಿ ಬಹನಾಗಾ ಬಜಾರ್‌ಗೆ ಬಂದಿದ್ದೇನೆ ಮತ್ತು ಇಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು ಎಂಬ ಬಗ್ಗೆ ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದೇನೆ” ಎಂದಿದ್ದಾರೆ.

ಬಳಿಕ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಬಹನಗಾ ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ರೂಪಾಯಿ ಹಾಗೂ ಗ್ರಾಮ ಹಾಗೂ ಸಮೀಪದ ಗ್ರಾಮಗಳ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಒಟ್ಟು ಮೊತ್ತದ ಅರ್ಧದಷ್ಟು ಹಣವನ್ನು ಸಂಸದ್ ನಿಧಿಯಿಂದ ಮತ್ತು ಉಳಿದ ಅರ್ಧವನ್ನು ಭಾರತೀಯ ರೈಲ್ವೇಯಿಂದ ನಿಗದಿಪಡಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
Odisha Train Accident: ಒಡಿಶಾ ರೈಲು ದುರಂತದ ಸಾವಿನ ಸಂಖ್ಯೆ ಮತ್ತೆ ಏರಿಕೆ!
ನಿಲ್ದಾಣದ ಹಾನಿ ಮತ್ತು ಪುನಃಸ್ಥಾಪನೆ ಕಾರ್ಯದ ಬಗ್ಗೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, “ಬಹುತೇಕ ಕೆಲಸ ಮುಗಿದಿದೆ, ಸಿಗ್ನಲಿಂಗ್ ಕೆಲಸ ಮಾತ್ರ ಉಳಿದಿದೆ. ಮುಂದಿನ ನಾಲ್ಕು ದಿನಗಳಲ್ಲಿ ಇದನ್ನು ಮಾಡಬೇಕು. ನಾನು ಬಹನಾಗಾ ಬಜಾರ್‌ನಲ್ಲಿ ನಡೆಯುತ್ತಿರುವ ಎಲ್ಲಾ ಪುನಃಸ್ಥಾಪನೆ ಕಾರ್ಯಗಳನ್ನು ಪರಿಶೀಲಿಸಿದೆ ಮತ್ತು ಇಲ್ಲಿನ ಸ್ಥಳೀಯರೊಂದಿಗೆ ಸಂವಾದ ನಡೆಸಿದೆ. ಸ್ಥಳೀಯರು ಏನೇ ಮನವಿ ಮಾಡಿದರೂ ಅದನ್ನು ಶೀಘ್ರವೇ ಮಾಡಲಾಗುವುದು. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಸ್ವತಂತ್ರ ತನಿಖೆ ನಡೆಯುತ್ತಿದೆ” ಎಂದಿದ್ದಾರೆ.

ಸಿಬ್ಬಂದಿ ತಲೆಮರೆಸಿಕೊಂಡಿರುವ ವರದಿಗಳನ್ನು ರೈಲ್ವೇ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಕುಮಾರ್ ಚೌಧರಿ ಅವರು ರೈಲು ಅಪಘಾತದ ನಂತರ ರೈಲ್ವೆ ಸಿಬ್ಬಂದಿ ಪರಾರಿಯಾಗಿರುವ ಬಗ್ಗೆ ಮಾಧ್ಯಮ ವರದಿಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. “ಇದು ಸಂಪೂರ್ಣವಾಗಿ ತಪ್ಪು. ಸಂಪೂರ್ಣ ಸಿಬ್ಬಂದಿ ಹಾಜರಿದ್ದು ವಿಚಾರಣೆಯ ಭಾಗವಾಗಿದೆ. ಅವರು ಏಜೆನ್ಸಿಯ ಮುಂದೆ ಹಾಜರಾಗುತ್ತಿದ್ದಾರೆ” ಎಂದಿದ್ದಾರೆ.
ಅಮೀರ್ ಖಾನ್ ಎಂಬ ಜೂನಿಯರ್ ಇಂಜಿನಿಯರ್ (ಜೆಇ) ತಲೆಮರೆಸಿಕೊಂಡ ನಂತರ ಅವರ ಬಾಡಿಗೆ ಮನೆಗೆ ಕೇಂದ್ರೀಯ ತನಿಖಾ ದಳವು ಸೀಲ್ ಮಾಡಿದೆ ಎಂದು ಸೋಮವಾರ ಮಾಧ್ಯಮ ವರದಿಗಳು ತಿಳಿಸಿವೆ. ಜೆಇಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದ್ದು, ಏಜೆನ್ಸಿಯಿಂದ ವಿಚಾರಣೆಗೆ ಒಳಪಡಿಸಲಾಗಿದೆ. ಸಿಗ್ನಲ್ ಜೆಇಗಳು ಭಾರತೀಯ ರೈಲ್ವೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ ಮತ್ತು ಸಿಗ್ನಲಿಂಗ್ ಉಪಕರಣಗಳ ಸ್ಥಾಪನೆ, ನಿರ್ವಹಣೆ ಮತ್ತು ದುರಸ್ತಿಗೆ ಜವಾಬ್ದಾರರಾಗಿರುತ್ತಾರೆ.
ಬಾಲಸೋರ್ ರೈಲು ಅಪಘಾತ
ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 290 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಹಳಿತಪ್ಪಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದೇ ಸಮಯದಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಆ ಸಮಯದಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಬೋಗಿಗಳಿಗೆ ತಾಗಿತ್ತು.
ರೈಲು ದುರಂತದಲ್ಲಿ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತವಾಗಿ ವರದಿಯಾಗಿದೆ. 100 ಕ್ಕೂ ಹೆಚ್ಚು ಜನರು ಕಟಕ್‌ನ SCB ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮತ್ತು ಭುವನೇಶ್ವರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ, ಏಮ್ಸ್ ಭುವನೇಶ್ವರದಲ್ಲಿ ಸಂರಕ್ಷಿಸಲಾದ 81 ದೇಹಗಳ ಗುರುತುಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. ಅವುಗಳ ಡಿಎನ್‌ಎ ಪರೀಕ್ಷೆಗಳ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಇಲ್ಲಿಯವರೆಗೆ, 78 ಕುಟುಂಬಗಳಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗಿದೆ.
English summary
Balasore train accident: Railways minister Ashwini Vaishnaw announces rs 2 crore for development of villages near Odisha train accident site . know more.
Story first published: Tuesday, June 20, 2023, 18:58 [IST]