ಆಷಾಢ ಶುಕ್ರವಾರ: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಈ ವಾಹನಗಳಿಗೆ ಮಾತ್ರ ಅವಕಾಶ, ಇಲ್ಲಿದೆ ವಿವರ | Ashada Shukravara: Allowed only for KSRTC buses for Mysuru’s Chamundi hill

Travel

oi-Madhusudhan KR

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಜೂನ್‌, 22: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಗೆಯೇ ಈ ವೇಳೆ ಚಾಮುಂಡಿ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರತುಪಡಿಸಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಂಭ್ರಮ ಗರಿಗೆದರಿದೆ. ಆದರೆ ಈ ಬಾರಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Ashada Shukravara: Allowed only for KSRTC buses for Mysurus Chamundi hill

ಜಿಲ್ಲಾಡಳಿತದಿಂದ ಭಕ್ತರಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ತಾವರೆಕಟ್ಟೆ ಕಡೆಯಿಂದ, ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ಇಂಡಸ್‌ವ್ಯಾಲಿ ರಸ್ತೆ ಮೂಲಕ ಹೋಗುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

Shakti scheme: ಮೈಸೂರು ವಿಭಾಗದಲ್ಲಿ ಶಕ್ತಿ ಯೋಜನೆಗೆ ಲಭ್ಯವಿರುವ ಬಸ್‌ಗಳು, ಯಾವ ಕ್ಷೇತ್ರಕ್ಕೆ ಲಾಭ?, ಇಲ್ಲಿದೆ ವಿವರShakti scheme: ಮೈಸೂರು ವಿಭಾಗದಲ್ಲಿ ಶಕ್ತಿ ಯೋಜನೆಗೆ ಲಭ್ಯವಿರುವ ಬಸ್‌ಗಳು, ಯಾವ ಕ್ಷೇತ್ರಕ್ಕೆ ಲಾಭ?, ಇಲ್ಲಿದೆ ವಿವರ

ಬೆಟ್ಟದ ಪಾದದಿಂದ ಮೆಟ್ಟಿಲು ಮುಖಾಂತರ ದೇವಸ್ಥಾನಕ್ಕೆ ಹೋಗುವ ಭಕ್ತರು ವಾಹನಗಳನ್ನು ಪಿಂಜರಾಪೋಲ್ ಮುಂಭಾಗದ ಮೈದಾನದಲ್ಲಿ ಹಾಗೂ ಪೊಲೀಸರು ಸೂಚಿಸುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ದೇವಸ್ಥಾನಕ್ಕೆ ಹೋಗಬೇಕು ಎಂದು ಮಾಹಿತಿ ನೀಡಿದರು.

ಜೂನ್‌ 23, 30, ಜುಲೈ 7, 14ರ ಆಷಾಢ ಶುಕ್ರವಾರ ಮತ್ತು ಜುಲೈ 10ರ ಶ್ರೀ ಚಾಮುಂಡೇಶ್ವರಿ ವರ್ಧಂತಿಯಂದು ಉಚಿತ ಬಸ್ ಸೇವೆ ಇರಲಿದೆ. ಬೆಟ್ಟಕ್ಕೆ ಬರುವ ಭಕ್ತರು ತಮ್ಮ ವಾಹನಗಳನ್ನು ಲಲಿತ ಮಹಲ್ ಮೈದಾನದಲ್ಲಿ ನಿಲುಗಡೆ ಮಾಡಿ ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಿರುವ ಬಸ್‌ಗಳಲ್ಲಿ ದೇವಸ್ಥಾನಕ್ಕೆ ತೆರಳಬಹುದಾಗಿದೆ. ಮುಂಜಾನೆ 3 ಗಂಟೆಯಿಂದ ರಾತ್ರಿ 10ರವರೆಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಪ್ರತ್ಯೇಕ ಹೆಲ್ಪ್ ಡೆಸ್ಕ್‌ಗಳ ಸ್ಥಾಪನೆ

ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗಿದೆ. ಇದರೊಂದಿಗೆ ಭದ್ರತಾ ದೃಷ್ಟಿಯಿಂದ ವಿದ್ಯುದೀಪಗಳ ವ್ಯವಸ್ಥೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಲಲಿತ ಮಹಲ್ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಭದ್ರತಾ ವ್ಯವಸ್ಥೆ, ತಾತ್ಕಾಲಿಕ ಬಸ್ ನಿಲ್ದಾಣ, ಶೌಚಗೃಹ, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಸಹ ಕಲ್ಪಿಸಲಾಗಿದೆ.

ವಾಹನ ನಿಲುಗಡೆಗಳ ಮಾಹಿತಿ

ಇನ್ನು ಲಲಿತಾದ್ರಿಪುರದ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರು ತಮ್ಮ ವಾಹನಗಳಲ್ಲಿ ಲಲಿತಾದ್ರಿಪುರದ ರಸ್ತೆ ಮೂಲಕ ಲಲಿತಮಹಲ್ ಮೈದಾನ ತಲುಪಬಹುದಾಗಿದೆ. ಬಳಿಕ ಲಲಿತಮಹಲ್ ಮೈದಾನದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ನಿಲುಗಡೆ ಮಾಡಬೇಕು.

ಹಾಗೆಯೇ ಉತ್ತನಹಳ್ಳಿ ರಸ್ತೆ ಕಡೆಯಿಂದ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ನಂಜನಗೂಡು ರಸ್ತೆ ಮೂಲಕ ಎಂ.ಎಲ್.ಸೋಮಸುಂದರಂ ವೃತ್ತ, ಮಹಾರಾಣಾ ಪ್ರತಾಪ ಸಿಂಹ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಲಲಿತಮಹಲ್ ರಸ್ತೆ ಮೂಲಕ ಲಲಿತಮಹಲ್ ಮೈದಾನದ ಖಾಲಿ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು ಎನ್ನುವ ಸೂಚನೆಯನ್ನು ನೀಡಿದ್ದಾರೆ.

ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿ

ಅಷ್ಟೇ ಅಲ್ಲದೆ ಚಾಮುಂಡಿ ಬೆಟ್ಟದ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಿ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಸಚಿವ ಎಚ್‌.ಸಿ.ಮಹದೇವಪ್ಪ ಇತ್ತೀಚೆಗಷ್ಟೇ ಸೂಚನೆ ನೀಡಿದ್ದರು.

ಗಣ್ಯ ವ್ಯಕ್ತಿಗಳಿಗೆ ವಾಹನ ಪಾಸ್ ನೀಡಬೇಕು. ಪಾಲಿಕೆ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ಆಷಾಢ ಶುಕ್ರವಾರದಂದು ಹಿಂದಿನ ಹಾಗೂ ಮಾರನೇ ದಿನ ಸ್ವಚ್ಛತೆ ಕಾಪಾಡುವುದು, ಸಂಚಾರ ಶೌಚಾಲಯ ವ್ಯವಸ್ಥೆಯನ್ನಯ ಮಾಡಬೇಕು. ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರು.

ಹಾಗೆಯೇ ಚಾಮುಂಡೇಶ್ವರಿ ದೇಗುಲದ ಹೈ ಮಾಸ್ಟ್ ದೀಪವನ್ನು ಕೂಡಲೇ ದುರಸ್ತಿಪಡಿಸಿ ಎಂದು ಸೂಚಿಸಿದ್ದರು.ಸೆಸ್ಕ್ ವತಿಯಿಂದ ಚಾಮುಂಡಿ ಬೆಟ್ಟದ ದೇಗುಲದ ಸುತ್ತ, ದೇವೀಕೆರೆ ಹಾಗೂ 1,000 ಮೆಟ್ಟಿಲುಗಳ ಬಳಿಯ ವಿದ್ಯುತ್ ದೀಪಗಳನ್ನು ದುರಸ್ತಿಗೊಳಿಸಬೇಕು. ಅಷ್ಟೇ ಅಲ್ಲದೇ ಬೆಟ್ಟದಲ್ಲಿರುವ ದೇವಾಲಯಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಶೇಷ ದೀಪಾಲಂಕಾರ, ಎಲ್‌ಇಡಿ ದೀಪಗಳ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದ್ದರು.

English summary

Ashada Shukravara in Mysuru chamundi hill, Allowed only for KSRTC buses for Mysuru’s Chamundi hill, here see complete details,

Story first published: Thursday, June 22, 2023, 16:00 [IST]

Source link