English Tamil Hindi Telugu Kannada Malayalam Android App
Wed. Oct 5th, 2022

Online Desk

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಾರದ ನಂತರ ಹೋಂ ಕ್ವಾರಂಟೈನ್ ನಿಂದ ಹೊರಬಂದು ಎಂದಿನಂತೆ ಸಾರ್ವಜನಿಕ ಸಭೆ, ಸಮಾರಂಭ ಕಾರ್ಯಕ್ರಮಗಳಲ್ಲಿ ಇಂದು ಗುರುವಾರದಿಂದ ಭಾಗವಹಿಸುತ್ತಿದ್ದಾರೆ. 

ವಾರದ ಹಿಂದೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡು ಹೋಂ ಕ್ವಾರಂಟೈನ್ ನಲ್ಲಿದ್ದು ಅಗತ್ಯ ಆರೋಗ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಬೆಳಗ್ಗೆ ಬೆಂಗಳೂರಿನ ಆರ್ ಟಿ ನಗರದಲ್ಲಿರುವ ತಮ್ಮ ನಿವಾಸದ ಹೊರಗೆ ಜನತಾ ದರ್ಶನ ಏರ್ಪಡಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಇಂದು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಚಿತ್ರ ನಟ ಯಶ್ ಅವರೊಂದಿಗೆ ಹೆಲಿ ಕ್ಯಾಪ್ಟರ್ ನಲ್ಲಿ ಮೈಸೂರಿಗೆ ತೆರಳಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂದು ಯುವಜನ ಮಹೋತ್ಸವ ಕಾರ್ಯಕ್ರಮವಿದ್ದು ಅದರಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಕೊರೋನಾ ಸೋಂಕಿನಿಂದ ಗುಣಮುಖನಾಗಿದ್ದು ಇಂದು ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೇನೆ. ಮಂಡ್ಯ ಮತ್ತು ಮೈಸೂರುಗಳಲ್ಲಿ ವಿವಿ ಕಾರ್ಯಕ್ರಮಗಳು, ಆಜಾದ್ ಕಿ ಅಮೃತ ಮಹೋತ್ಸವ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದೇನೆ ಎಂದರು.

ರಾಜ್ಯ ಬಿಜೆಪಿಯಲ್ಲಿ ಮೂರನೇ ಸಿಎಂ ಬರುತ್ತಾರೆ, ಬೊಮ್ಮಾಯಿ ಬದಲಾಗುತ್ತಾರೆ ಎಂದು ಕಾಂಗ್ರೆಸ್ ಮಾಡಿರುವ ಟ್ವೀಟ್ ಸಾಕಷ್ಟು ಸಂಚಲನ ಉಂಟುಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾಂಗ್ರೆಸ್ ನವರು ಇದು ಮೊದಲನೇ ಸಾರಿ ಅಲ್ಲ ಟ್ವೀಟ್ ಮಾಡುತ್ತಿರುವುದು, ಅವರ ಮನಸ್ಸಿನಲ್ಲಿರುವ ಅತಂತ್ರವನ್ನು ರಾಜ್ಯದ ಜನರ ಮನಸ್ಸಿನಲ್ಲಿ ಹರಡಲು ನೋಡುತ್ತಿದ್ದಾರೆ. ಆದರೆ ರಾಜ್ಯದ ಜನತೆ ನಂಬುವ ಸ್ಥಿತಿಯಲ್ಲಿಲ್ಲ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಊಹಾಪೋಹ: ಮುಖ್ಯಮಂತ್ರಿ ಬೊಮ್ಮಾಯಿಗೆ ಬಿಜೆಪಿ ಹೈಕಮಾಂಡ್ ಬೆಂಬಲ

ನಾನು ಸ್ಥಿತಪ್ರಜ್ಞನಾಗಿದ್ದೇನೆ, ಸತ್ಯ ನನಗೆ ಗೊತ್ತಿದೆ, ಅವರ ಮಾತುಗಳಿಗೆ ಯಾವುದೇ ಆಧಾರವಿಲ್ಲ, ಇದು ರಾಜಕೀಯ ಪ್ರೇರಿತವಾಗಿರುವಂತಹ ಮಾತುಗಳು ಎಂದು ನನಗೆ ಗೊತ್ತಿದೆ, ಹೀಗಾಗಿ ನಾನು ಸ್ಥಿತಪ್ರಜ್ಞನಾಗಿದ್ದೇನೆ. ಇದರಿಂದ ನನ್ನ ನಿರ್ಣಯಗಳು ಇನ್ನಷ್ಟು ಗಟ್ಟಿಯಾಗಲಿದ್ದು, ಇನ್ನಷ್ಟು ಹೆಚ್ಚಿನ ಕೆಲಸಗಳನ್ನು ಮಾಡಲು ಪ್ರೇರಣೆ ಸಿಗುತ್ತದೆ ಎಂದರು.

ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಮಯವನ್ನು ರಾಜ್ಯದ ಜನತೆಯ ಕೆಲಸಗಳಿಗೆ, ಪಕ್ಷದ ಬಲವರ್ಧನೆಗೆ ನೀಡುತ್ತೇನೆ ಎಂದರು. ಜನರ ಬಳಿಗೆ ಹೋಗುವ ಕೆಲಸ ಮಾಡುತ್ತೇವೆ. ವಿರೋಧ ಪಕ್ಷದವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದರು.

ರಾಜ್ಯದಲ್ಲಿ ಪ್ರವಾಹ, ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಬಗ್ಗೆ ಸಮೀಕ್ಷೆ ತಯಾರಾಗುತ್ತಿದ್ದು ಇನ್ನೆರಡು ಮೂರು ದಿನಗಳಲ್ಲಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.

ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ತೀರ್ಪು ಬಂದಿದ್ದು ಸರ್ಕಾರದ ಸ್ವತ್ತಾಗಿರುವುದರಿಂದ ಸರ್ಕಾರದ ನೀತಿ ನಿಯಮ ಪ್ರಕಾರ ಮುಂದಿನ ದಿನಗಳಲ್ಲಿ ಸಭೆ ಸಮಾರಂಭ, ಉತ್ಸವಗಳು ಕಾನೂನು ಪ್ರಕಾರ ನಡೆಯುತ್ತದೆ. ಗಣೇಶ ಉತ್ಸವ ನಡೆಸುವ ಬಗ್ಗೆ ಕಾನೂನು ಮುಖ್ಯವಾಗುತ್ತದೆಯೇ ಹೊರತು ರಾಜಕೀಯ ನಾಯಕರ ಹೇಳಿಕೆಯಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದರು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published.