English Tamil Hindi Telugu Kannada Malayalam Android App
Mon. Oct 3rd, 2022

The New Indian Express

ಚಿತ್ರದುರ್ಗ/ಬೆಂಗಳೂರು: ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಹಾವೇರಿ ಹೊಸಮಠದ ಸ್ವಾಮೀಜಿಗಳು ಹೇಳಿದಾಗ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಡೆದ ಪ್ರಸಂಗ ಇಂದು ಚಿತ್ರದುರ್ಗದ ಮುರುಘಾ ಮಠದಲ್ಲಿ ರಾಹುಲ್ ಗಾಂಧಿ ಭೇಟಿ ವೇಳೆ ನಡೆಯಿತು ಎಂದು ಇಂಗ್ಲಿಷ್ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ದಾವಣಗೆರೆಯಲ್ಲಿ ಸಿದ್ದರಾಮೋತ್ಸವಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರೊಂದಿಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದರು.

ರಾಹುಲ್ ಗಾಂಧಿ ಭೇಟಿ ವೇಳೆ ಹಲವು ಮಠಗಳ ಮಠಾಧೀಶರು ಆಗಮಿಸಿದ್ದರು. ಲಿಂಗಾಯತ ಸೆಮಿನಾರ್ ನಲ್ಲಿ ಹಾವೇರಿ ಹೊಸಮಠದ ಶ್ರೀಗಳು ಮಾತನಾಡುವಾಗ ರಾಹುಲ್ ಗಾಂಧಿಯವರು ಮುಂದಿನ ಪ್ರಧಾನಿಯಾಗುತ್ತಾರೆ ಎಂದರು. ಆಗ ಮುರುಘಾ ಶ್ರೀಗಳು, ಮಧ್ಯೆ ತಡೆದು ನಮ್ಮ ಮಠಕ್ಕೆ ಯಾರೇ ಭೇಟಿ ನೀಡಿದರೂ ಅವರಿಗೆ ಆಶೀರ್ವಾದ ನೀಡುತ್ತೇವೆ ಎಂದು ಹೇಳಿದರಂತೆ.

ಕಾಂಗ್ರೆಸ್​ ವರಿಷ್ಠ ರಾಹುಲ್​​ ಗಾಂಧಿ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.ಶಿವಮೂರ್ತಿ ಮುರುಘಾ ಶರಣರ ಜತೆ 20ಕ್ಕೂ ಹೆಚ್ಚು ಮಠಾಧೀಶರ ಜತೆ ರಾಹುಲ್​ ಗಾಂಧಿ ಇದೇ ವೇಳೆ ಸಂವಾದ ನಡೆಸಿದರು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ನಾನು ಕೆಲವು ಸಮಯದಿಂದ ಬಸವಣ್ಣನವರ ಬಗ್ಗೆ ಓದುತ್ತಿದ್ದೇನೆ. ಅವರ ತತ್ವಗಳನ್ನು ಅನುಸರಿಸುತ್ತಿದ್ದೇನೆ. ಹಾಗಾಗಿ, ಇಲ್ಲಿಗೆ ಬಂದಿರುವುದು ನನಗೆ ನಿಜವಾದ ಗೌರವ. ಇಷ್ಟಲಿಂಗ ಮತ್ತು ಶಿವಯೋಗದ ಬಗ್ಗೆ ಸ್ವಲ್ಪ ಹೆಚ್ಚು ವಿವರವಾಗಿ ನನಗೆ ಕಲಿಸುವ ಯಾರನ್ನಾದರೂ ನೀವು ನನಗೆ ಕಳುಹಿಸಿದರೆ, ನಾನು ಬಹುಶಃ ಅದರಿಂದ ಪ್ರಯೋಜನ ಪಡೆಯಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ರಾಹುಲ್ ಗಾಂಧಿಗೆ ದೀಕ್ಷೆ: ಇಂದು ರಾಹುಲ್ ಗಾಂಧಿಯವರಿಗೆ ಮುರುಘಾ ಶ್ರೀಗಳು ಹಣೆಗೆ ವಿಭೂತಿ ಹಚ್ಚಿ ಲಿಂಗಧಾರಣೆ ಮಾಡಿ ಲಿಂಗದೀಕ್ಷೆ ನೀಡಿದ್ದಾರೆ. ಭೇಟಿ ವೇಳೆ ರಾಹುಲ್ ಗಾಂಧಿಯವರು ಮಠದ ಕರ್ತೃ ಮುರಿಗಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಪುಷ್ಪಾರ್ಚನೆ ಮಾಡಿ ಧ್ಯಾನ ಮಾಡಿದರು. ನಂತರ ಶಿವಮೂರ್ತಿ ಮುರುಘಾ ಶರಣರಿಗೆ ಇಷ್ಟ ಲಿಂಗ ಬಗ್ಗೆ ಮಾಹಿತಿ ಕೇಳಿದರಂತೆ. ಅವರು ಲಿಂಗ ಪೂಜೆ ಮಹತ್ವ ಬಗ್ಗೆ ವಿವರಿಸಿದರು. ಆಗ ರಾಹುಲ್ ಗಾಂಧಿ ನಾವು ಕೂಡ ಲಿಂಗ ದೀಕ್ಷೆ ಪಡೆದುಕೊಳ್ಳುವುದಾಗಿ ಹೇಳಿದರು.

ಲಿಂಗಪೂಜೆ ಇತ್ಯಾದಿಗಳ ಕುರಿತು ತರಬೇತಿ ನೀಡಲು ಯಾರನ್ನಾದರೂ ದೆಹಲಿಗೆ ಕಳುಹಿಸಲು ರಾಹುಲ್ ಗಾಂಧಿ ಕೋರಿಕೆ ಇಟ್ಟರು.

ಕರ್ನಾಟಕದಲ್ಲಿ ಶೇಕಡಾ 17ರಷ್ಟಿರುವ ಲಿಂಗಾಯತ ಸಮುದಾಯ ಸಾಮಾನ್ಯವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದೆ. ಮುಂದಿವ ವರ್ಷ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ರಾಹುಲ್ ಗಾಂಧಿಯವರ ಭೇಟಿ ಪಕ್ಷದೊಳಗೆ ಒಗ್ಗಟ್ಟನ್ನು ಪ್ರದರ್ಶಿಸಲು ಮತ್ತು ಲಿಂಗಾಯತ ಸಮುದಾಯವನ್ನು ಸೆಳೆಯುವ ಯತ್ನ ಎಂದು ಕೂಡ ಹೇಳಲಾಗುತ್ತಿದೆ. 

ರಾಜ್ಯದಲ್ಲಿ 2013ರಿಂದ 2018ರವರೆಗೆ ಕಾಂಗ್ರೆಸ್ ಆಡಳಿತವಿತ್ತು. ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಆದರೆ ಮೈತ್ರಿ ಸರ್ಕಾರದಲ್ಲಿ ಹಲವು ಶಾಸಕರು ರಾಜೀನಾಮೆ ನೀಡಿ ಆಪರೇಷನ್ ಕಮಲ ನಡೆದು ಮೈತ್ರಿ ಸರ್ಕಾರ ಕೇವಲ ಒಂದೂವರೆ ವರ್ಷದಲ್ಲಿ ಮುರಿದುಬಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. 

ಬಿಜೆಪಿಯಲ್ಲಿ ಆರಂಭದಲ್ಲಿ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಕಳೆದ ವರ್ಷ ಬಿಜೆಪಿಯೊಳಗೆ ರಾಜಕೀಯ ಸನ್ನಿವೇಶಗಳು ನಡೆದು ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ಕೆಳಗಿಳಿದು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾದರು.

Source link

For more news update stay with actp news

Android App

Facebook

Twitter

Dailyhunt

Share Chat

Telegram

Koo App

Leave a Reply

Your email address will not be published.